ಮೈಸೂರು: ಮಗನ ನಿಶ್ಚಿತಾರ್ಥದ ವೇಳೆ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ವಜ್ರದ ನೆಕ್ಲೆಸ್ ಹಾಗೂ ಓಲೆ ಕಳ್ಳತನವಾಗಿದ್ದು, ಮಗಳು ಹಾಗೂ ಭಾವಿ ಸೊಸೆಗೆ ಮೇಕಪ್ ಮಾಡಲು ಕರೆಸಿದ್ದ ಯುವತಿಯರು ಕಳವು ಮಾಡಿರಬಹುದು ಎಂದು ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಿದ್ಧಾರ್ಥ ನಗರದ ನಿವಾಸಿಯಾದ ಉದ್ಯಮಿ ರಾಜೇಂದ್ರ ಕುಮಾರ್ ತಮ್ಮ ಮಗನ ನಿಶ್ಚಿತಾರ್ಥವನ್ನು ನಗರದ ಹೂಟಗಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದರು. ಮಗಳು ಹಾಗೂ ಭಾವಿ ಸೊಸೆಗೆ ಮೇಕಪ್ ಮಾಡಲು ಮುಂಬೈನಿಂದ ಇಬ್ಬರು ಯುವತಿಯರನ್ನು ಕರೆಸಿದ್ದರು. ಮೇಕಪ್ ಮಾಡುವಾಗ ಮಗಳ ಬ್ಯಾಗ್‌ನಲ್ಲಿ ವಜ್ರದ ಓಲೆ ಹಾಗೂ ನೆಕ್ಲೆಸ್ ಇರುವುದನ್ನು ಮೇಕಪ್ ಮಾಡುವ ಯುವತಿಯರಿಗೆ ತೋರಿಸಲಾಗಿತ್ತು. ನಂತರ ನಿಶ್ಚಿತಾರ್ಥ ಜರುಗಿದೆ. ಇದೇ ವೇಳೆ ಮೇಕಪ್ ಮಾಡಲು ಬಂದಿದ್ದವರು ರಾತ್ರಿ ಹೋಟೆಲ್‌ನಿಂದ ಬೆಂಗಳೂರಿಗೆ ತೆರಳಿ ಅಲ್ಲಿಂದ ವಿಮಾನದಲ್ಲಿ ತೆರಳಿದ್ದಾರೆ. ಮರುದಿನ ವಜ್ರದ ನೆಕ್ಲೆಸ್ ಹಾಗೂ ಓಲೆ ಕಳುವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ವಿಜಯನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾಫಿ ನೀಡಿ ವೃದ್ಧೆಯ ಸರ ಕದ್ದ ಆರೋಪಿ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಗೆ ಮತ್ತು ಬೆರೆಸಿದ ಕಾಫಿ ನೀಡಿ ಚಿನ್ನದ ಸರ ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಿದ್ಧಾರ್ಥ ಬಡಾವಣೆಯ ನಿವಾಸಿ ಅಂಬುಜಾಕ್ಷಮ್ಮ(71) ತಮ್ಮ 76 ಗ್ರಾಂ ತೂಕದ ಚಿನ್ನಾಭರಣ ಕಳೆದುಕೊಂಡಿದ್ದಾರೆ. ಕಳೆದ ಶನಿವಾರ ಮೈಸೂರು ಗ್ರಾಮಾಂತರ ನಿಲ್ದಾಣದಲ್ಲಿ ಘಟನೆ ನಡೆದಿದೆ.
ಬೆಂಗಳೂರಿನಿಂದ ಮೈಸೂರಿಗೆ ಬರಲು ಸ್ಯಾಟ್‌ಲೈಟ್ ಬಸ್ ನಿಲ್ದಾಣಕ್ಕೆ ಬಂದಿದ್ದ ಅಂಬುಜಾಕ್ಷಮ್ಮ ಅವರನ್ನು ಪರಿಚಯ ಮಾಡಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ, ತಾನೇ ಟಿಕೆಟ್ ತಂದು ಕೊಡುವುದಾಗಿ ಹೇಳಿ ಬಸ್ ಹತ್ತಿಸಿದ್ದು, ಟಿಕೆಟ್ ತೆಗೆದುಕೊಂಡು ಬಂದು ಜೊತೆಗೆ ಪ್ರಯಾಣ ಬೆಳೆಸಿದ್ದಾನೆ. ಈ ವೇಳೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಚಿನ್ನಾಭರಣ ಕಳಚಿ ಬ್ಯಾಗ್‌ನಲ್ಲಿರಿಸುವಂತೆ ಸಲಹೆ ನೀಡಿದ್ದಾನೆ. ಅದಕ್ಕೆ ತಕ್ಕಂತೆ ಅಂಬುಜಾಕ್ಷಮ್ಮ ತಮ್ಮ ಕತ್ತಿನಲ್ಲಿದ್ದ 65 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು 11 ಗ್ರಾಂ ತೂಕದ ಚಿನ್ನದ ಬಳೆ ಕಳಚಿ ಬ್ಯಾಗ್‌ನಲ್ಲಿರಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಳಗಿಳಿದು ಹೋದ ದುಷ್ಕರ್ಮಿ ವೃದ್ಧೆಗೆ ನೀಡುವ ಕಾಫಿಯಲ್ಲಿ ಮತ್ತು ಬೆರೆಸಿದ್ದಾನೆ. ಕಾಫಿ ಕುಡಿದ ಕೆಲ ಹೊತ್ತಿನ ಬಳಿಕ ಅಂಬುಜಾಕ್ಷಮ್ಮ ಅವರಿಗೆ ತಲೆ ಸುತ್ತು ಬಂದಂತಾಗಿ ಮಲಗಿದ್ದಾರೆ. ಈ ವೇಳೆ ಅವರ ಬಳಿಯಿದ್ದ ಚಿನ್ನಾಭರಣ ದೋಚಿಕೊಂಡು ಖದೀಮ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧೆ ನೀಡಿದ ದೂರಿನ ಮೇರೆಗೆ ಲಷ್ಕರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.