ಬೆಂಗಳೂರು : ಖಾಸಗಿ ರಿಯಲ್ ಎಸ್ಟೇಟ್ ಕಂಪೆನಿಯ ಖಾತಾ ವಿಚಾರಕ್ಕೆೆ ಸಂಬಂಧಿಸಿದಂತೆ ಲಂಚಕ್ಕೆೆ ಬೇಡಿಕೆಯಿಟ್ಟಿದ್ದ ಬಿಬಿಎಂಪಿ ಕಂದಾಯ ನಿರೀಕ್ಷಕ (ರೆವಿನ್ಯೂ ಇನ್‌ಸ್ಪೆೆಕ್ಟರ್) ಹಾಗೂ ಮಧ್ಯವರ್ತಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಂದಾಯ ನಿರೀಕ್ಷಕನ ಮನೆಯಲ್ಲಿ ದೊಡ್ಡ ಮೊತ್ತದ ಅಘೋಷಿತ ಆಸ್ತಿ ಪತ್ತೆಯಾಗಿದೆ.
ಬೆಂಗಳೂರು ಮಹದೇವಪುರ ವಲಯದ ರೆವಿನ್ಯೂ ಇನ್‌ಸ್ಪೆೆಕ್ಟರ್ ನಟರಾಜ್, ಮಧ್ಯವರ್ತಿ ಪವನ್ ಬಂಧಿತರು. ಮುಕ್ತಾ ಡೆವಲಪರ್ಸ್ ರಿಯಲ್ ಎಸ್ಟೇಟ್ ಕಂಪನಿ ಕೊಡಿಗೆಹಳ್ಳಿಯಲ್ಲಿ ಬೃಂದಾವನ್ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿದ್ದು, ಕಂಪನಿ ಮಾಲೀಕ 79 ಫ್ಲ್ಯಾಟ್‌ಗಳ ಖಾತಾಗಾಗಿ ಅರ್ಜಿ ಸಲ್ಲಿಸಿದ್ದರು. ಆರೋಪಿ ನಟರಾಜ್ ಪ್ರತಿ ಖಾತಾಗೆ 10 ಸಾವಿರದಂತೆ ಒಟ್ಟು 7.90 ಲಕ್ಷ ರೂ. ಲಂಚಕ್ಕೆೆ ಬೇಡಿಕೆಯಿಟ್ಟಿದ್ದರು. ಮುಕ್ತಾ ಡೆವಲಪರ್ಸ್ ಮಾಲೀಕ ಮಂಜುನಾಥ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಶುಕ್ರವಾರ ಮಹದೇವಪುರ ಬಿಬಿಎಂಪಿ ಕಚೇರಿಯಲ್ಲೇ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ನಟರಾಜ್ ಹಾಗೂ ಪವನ್‌ನನ್ನು ವಶಕ್ಕೆೆ ಪಡೆದಿದ್ದಾರೆ.
ದೊಡ್ಡ ಮೊತ್ತದ ಆಸ್ತಿ- ಪಾಸ್ತಿ ಪತ್ತೆೆ: ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದಾಗ ನಟರಾಜ್ ಹಲವರಿಂದ ಇದೇ ಮಾದರಿಯಲ್ಲಿ ಲಂಚ ಪಡೆದಿರುವ ಅನುಮಾನ ವ್ಯಕ್ತವಾಗಿತ್ತು. ನಟರಾಜ್ ಮನೆಯಲ್ಲಿ ಶೋಧಿಸಿದಾಗ 900 ಗ್ರಾಂ ಚಿನ್ನಾಭರಣ, 7 ಕೆಜಿ ಬೆಳ್ಳಿ ವಸ್ತುಗಳು, ಇನ್ನೋವಾ ಕ್ರಿಸ್ಟಾ , ಕಿಯಾ ಸೋನೆಟ್, ಹುಂಡೈ, ಆಡಿ ಕ್ಯೂ 3 ಕಾರುಗಳು ಪತ್ತೆಯಾಗಿವೆ. ಇದರ ಜೊತೆಗೆ ಮನೆಯಲ್ಲಿದ್ದ 80 ಸಾವಿರ ರೂ. ನಗದು, ಗಿರಿನಗರದ ಆವಲಹಳ್ಳಿ ಬಳಿ 30*40 ನಿವೇಶನದಲ್ಲಿ ಜಿ +2ನಲ್ಲಿ ಮನೆ, ಕೊಡಿಗೇಹಳ್ಳಿಯಲ್ಲಿರುವ ನಟರಾಜ್ ಪತ್ನಿ ಹೆಸರಿನಲ್ಲಿ 40*60 ನಿವೇಶನದ ದಾಖಲೆಗಳು ಪತ್ತೆಯಾಗಿವೆ. ಇನ್ನಷ್ಟು ಕಡೆಗಳಲ್ಲಿ ನಟರಾಜ್ ಆಸ್ತಿ ಹೊಂದಿರುವ ಶಂಕೆ ವ್ಯಕ್ತವಾಗಿದ್ದು, ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಲೋಕಾಯುಕ್ತರಿಂದ ಏಕಕಾಲಕ್ಕೆ ದಾಳಿ: ಇನ್ನೊಂದೆಡೆ ಬಿಬಿಎಂಪಿಯ ಕಂದಾಯ ಹಾಗೂ ನಗರ ಯೋಜನಾ ವಿಭಾಗಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಕುರಿತ ದೂರುಗಳ ಆಧರಿಸಿ, ನಗರದ 45 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ (ಆಗಸ್ಟ್ 3-2023)ರಂದು ಪರಿಶೀಲನೆ ನಡೆಸಿದ್ದರು.
ಕಡತ ವಿಲೇವಾರಿಗೆ ವಿಳಂಬ, ಖಾತಾ ಬದಲಾವಣೆ ಹಾಗೂ ಕಟ್ಟಡ ನಿರ್ಮಾಣಕ್ಕೆ ನಿರಾಕ್ಷೇಪಣ ಪತ್ರ ಪಡೆಯಲು ಲಂಚ ಕೇಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಬಿಬಿಎಂಪಿಯ ಎಲ್ಲಾ ವಲಯಗಳ ಆರ್ಓ, ಎಆರ್ಓ, ಎಡಿಟಿಪಿ ಕಚೇರಿಗಳು ಸೇರಿದಂತೆ 45 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ದಾಖಲೆ ಹಾಗೂ ಕಡತಗಳ ಪರಿಶೀಲನೆ: ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಆರ್ಓ, ಎಆರ್ಓ, ಎಡಿಟಿಪಿ ಕಚೇರಿಗಳು, ರೆವಿನ್ಯೂ ಮತ್ತು ನಗರ ಯೋಜನಾ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ನಿನ್ನೆ ಸಂಜೆ ನಾಲ್ಕು ಗಂಟೆಗೆ ದಾಳಿ ನಡೆಸಿರುವ ಲೋಕಾ ಅಧಿಕಾರಿಗಳು, ದಾಖಲೆ ಹಾಗೂ ಕಡತಗಳ ಪರಿಶೀಲಿಸಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ 45 ಕಚೇರಿಗಳ ಮೇಲೆ ಲೋಕಾಯುಕ್ತರಿಂದ ಏಕಕಾಲಕ್ಕೆ ದಾಳಿ