ಬೆಂಗಳೂರು: ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾದ ನಂತರ ಜಂಟಿ ಹೋರಾಟ ಮಾಡುತ್ತಿರುವ ಮಾಜಿ ಸಿಎಂಗಳಾದ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಬಿ ಎಸ್ ಯಡಿಯೂರಪ್ಪ ತಪ್ಪು ತಿಳಿದುಕೊಂಡಿದ್ದಾರೆ. ಕಾವೇರಿ ಹೋರಾಟವನ್ನು ತಂದು, ನಾವು ಎಷ್ಟೋ ಗೆಲುವು ಸಾಧಿಸಬಹುದು ಎಂದುಕೊಂಡಿದ್ದಾರೆ. ಆದ್ರೆ ಅದು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತಗಳು ಬಿಜೆಪಿಗೆ ಅಥವಾ ಬಿಜೆಪಿ ಮತಗಳು ಜೆಡಿಎಸ್ಗೆ ಬರುವುದಿಲ್ಲ. ಇವರ ಮೈತ್ರಿಯಿಂದ ಕಾಂಗ್ರೆಸ್ಗೆ ಅನುಕೂಲವಾಗಲಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶದ ಜನತೆಗೆ ಕಾವೇರಿ ಸಮಸ್ಯೆ ಅರ್ಥ ಆಗಿದೆ. ಯಾವ ಪುರುಷಾರ್ಥಕ್ಕಾಗಿ ಬಂದ್ ಮಾಡಬೇಕು. ಕರ್ನಾಟಕ ಬಂದ್ ಅನವಶ್ಯಕ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಮೈತ್ರಿ ಪ್ರತಿಭಟನೆ ನಡೆಯುತ್ತಿದೆ. ಕುಮಾರಸ್ವಾಮಿ, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನೀರು ಬಿಟ್ಟಿಲ್ವೇ? ಬಿಜೆಪಿಯ 25 ಸಂಸದರಿದ್ದಾರೆ. ನಿಮಗೆ ಚುನಾವಣೆ ಮುಖ್ಯವೇ ಹೊರತು ನೀರು ಮುಖ್ಯ ಅಲ್ಲ. ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಕುಳಿತು ಬಗೆಹರಿಸಬೇಕು ಎಂದು ಸಲಹೆ ನೀಡಿದರು.
ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂಬ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಪ್ರತಿಭಟನೆ ಮಾಡಲಿ, ಬಿಜೆಪಿ ಜೆಡಿಎಸ್ ದ್ವಂದ್ವ ನೀತಿ ಅನುಸರಿಸುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೋಸ್ಕರ ನೀರು ಬಿಟ್ಟಿಲ್ಲ. ಕಾವೇರಿ ಸಮಿತಿ ಆದೇಶದಂತೆ ನೀರು ಬಿಡಲಾಗುತ್ತಿದೆ. ಯಾರ ಕಾಲದಲ್ಲಿ ನಿರ್ವಹಣಾ ಮಂಡಳಿ ಮಾಡಿದರೆಂದು ಜನರಿಗೆ ಗೊತ್ತು. ಪಕ್ಷ ಹೊರತುಪಡಿಸಿ ಮಾತನಾಡಬೆಕು. ನೀರು ಪಕ್ಷಗಳದ್ದಲ್ಲ, ಜನರದ್ದು. ಕಾವೇರಿ ವಿಚಾರದಲ್ಲಿ ರಾಜಕೀಯ ಬೇಡ. ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ಮಾಡಬೇಕು ಎಂದು ಹೆಚ್ ವಿಶ್ವನಾಥ್ ಆಗ್ರಹಿಸಿದರು.
ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ. ಅವರು ಧರಣಿಗೆ ಕುಳಿತುಕೊಳ್ಳಬೇಕು. ರಾಜಕೀಯ ಡ್ರಾಮಾ ಬಿಟ್ಟು ನೀರನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಬೇಕು. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕುಳಿತು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಕ್ಟೋಬರ್ 3 ರಂದು ಕುರುಬ ಸಮಾವೇಶ: ಸಮಸ್ತ ಕುರುಬ ಸಮುದಾಯದ ಬೃಹತ್ ರಾಷ್ಟ್ರೀಯ ಸಮಾವೇಶವನ್ನು ಬೆಳಗಾವಿಯ ಕ್ರೀಡಾಂಗಣದಲ್ಲಿ ಅಕ್ಟೋಬರ್ 3 ರಂದು ಹಮ್ಮಿಕೊಳ್ಳಲಾಗಿದೆ. ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಸನ್ಮಾನದ ಗೌರವ ನೀಡಲಾಗುತ್ತದೆ ಎಂದು ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಹೆಚ್. ವಿಶ್ವನಾಥ್ ಹಾಗೂ ಉಪಾಧ್ಯಕ್ಷ ಹೆಚ್. ಎಂ. ರೇವಣ್ಣ ಹೇಳಿದರು.
2014ರ ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಆರಂಭಗೊಂಡ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆ ತನ್ನ 9ನೇ ವಾರ್ಷಿಕೋತ್ಸವವನ್ನು ಅಕ್ಟೋಬರ್ 3ರಂದು ಆಚರಿಸಿಕೊಳ್ಳುತ್ತಿದೆ. ಈ ಕಾರ್ಯಕ್ರವನ್ನು ಬೆಳಗಾವಿಯಲ್ಲಿ ಮಾಡಲು ಉದ್ದೇಶಿಸಲಾಗಿದೆ. ದೇಶದ ವಿವಿಧ ಸಾಧಕರು, ರಾಜ್ಯಪಾಲರು, ರಾಜಕೀಯ ನಾಯಕರು, ಹಿರಿಯರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಕುರುಬ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡುವ ಹಾಗೂ ಹೊಸ ಆಶಯಗಳಿಗೆ ಹೊಂದಿಕೊಳ್ಳುವ ಹತ್ತು ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಹಾಗೂ ಕೇಂದ್ರ ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡುವ ಮೂಲಕ ಕುರುಬರ ಆಶೋತ್ತರಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಹಾಗಾಗಿ, ಬೆಳಗಾವಿಯಲ್ಲಿ ಅಕ್ಟೋಬರ್ 2 ರಂದು ನಡೆಯಲಿರುವ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚಿಂತನ-ಮಂಥನ ನಡೆಸಲಾಗುವುದು ಎಂದು ತಿಳಿಸಿದರು.