ಬೆಂಗಳೂರು: ಪ್ರವಾಹಪೀಡಿತ ಬೆಳಗಾವಿ ಭಾಗದ ವಿವಿಧ ಪ್ರದೇಶಗಳಿಗೆ ಅವಶ್ಯ ವಸ್ತುಗಳ ರವಾನೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಚಾಲನೆ ನೀಡಿದರು.
ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಿಂದ ಅಗತ್ಯ ವಸ್ತುಗಳ ರವಾನೆ ಮಾಡಲಾಯಿತು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರ ನಾಯಕರು ಇದೇ ಸಂದರ್ಭ ಉಪಸ್ಥಿತರಿದ್ದರು.
50 ಸಾವಿರ ಬ್ಲಾಕೇಟ್ಸ್, 15 ಸಾವಿರ ಬೆಡ್ ಶೀಟ್, ಅಕ್ಕಿ, ಬಿಸ್ಕೇಟ್, ಪ್ಲಾಸ್ಟಿಕ್ ವಸ್ತುಗಳು, ಟೂತ್ ಪೇಸ್ಟ್, ಬ್ರೇಶ್, 5 ಸಾವಿರ ಸೀರೆ, 5 ಸಾವಿರ ಪಂಚೆ ಸೇರಿದಂತೆ ಅಗತ್ಯ ವಸ್ತುಗಳ ರವಾನೆಗೆ ದೇವೇಗೌಡರು ಚಾಲನೆ ಕೊಟ್ಟರು. ಐದು ಲಾರಿಗಳಲ್ಲಿ ಹೊರಟ ಅಗತ್ಯ ವಸ್ತುಗಳ ಜೊತೆಗೆ ನಿಖಿಲ್ ಕುಮಾರಸ್ವಾಮಿ ಹಾಗೂ ರಾಜ್ಯ ಜೆಡಿಎಸ್ ಪದಾಧಿಕಾರಿಗಳು ತೆರಳಿದ್ದಾರೆ. ವಾಹನಗಳು ಹುಬ್ಬಳ್ಳಿ, ನರಗುಂದ, ನವಲಗುಂದ, ಬೆಳಗಾವಿ, ಬಾಗಲಕೋಟೆ, ಕೂಡಲ ಸಂಗಮ, ಯಾದಗಿರಿ ಮುಂತಾದ ಪ್ರದೇಶಗಳಿಗೆ ತೆರಳಿ ಅಗತ್ಯ ವಸ್ತುಗಳ ಪೂರೈಕೆ ಮಾಡಲಿವೆ.
ಹಿಂದೆಂದೂ ಕಂಡರಿಯದ ನೆರೆ:
ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿ, ಹಿಂದೆಂದೂ ಕಂಡರಿಯದ ನೆರೆ ಈ ಬಾರಿ ಬಂದಿದೆ. ಕೃಷ್ಣಾ ಅಚ್ಚುಕಟ್ಟು ಭಾಗ ಸಂಪೂರ್ಣವಾಗಿ ಪ್ರವಾಹಕ್ಕೆ ಮುಳುಗಿದೆ. ಇಂತಹ ಸಂಧರ್ಭದಲ್ಲಿ ಯಾರೂ ರಾಜಕೀಯ ಮಾಡಬಾರದು. ಮಂತ್ರಿ ಮಂಡಲ ಇಲ್ಲ ಅಂತೆಲ್ಲ ರಾಜಕೀಯ ಮಾಡಬಾರದು. ಯಡಿಯೂರಪ್ಪ 4-5 ದಿನಗಳಿಂದ ಓಡಾಡುತ್ತಿದ್ದಾರೆ. ಕುಮಾರಸ್ವಾಮಿ ಕೂಡಾ ಬಾಗಲಕೋಟೆ ಪ್ರವಾಸ ಮಾಡಿದ್ದಾರೆ. ಮೂರು ಪಕ್ಷದವರು ಈ ಸಮಯದಲ್ಲಿ ಒಟ್ಟಾಗಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಆಗಿದೆ. ಕೇಂದ್ರ ಸಚಿವರು ಏರಿಯಲ್ ಸರ್ವೆ ಮಾಡಿದ್ರೆ ಎಷ್ಟು ನಷ್ಟ ಆಗಿದೆ ಅಂತ ಗೊತ್ತಾಗೊಲ್ಲ ಎಂದರು.
5 ಸಾವಿರ ಕೋಟಿ ಅಗತ್ಯ
ಕೂಡಲೇ ಕೇಂದ್ರ ಸರ್ಕಾರ ಮಧ್ಯಂತರವಾಗಿ 5 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು. ಜೆಡಿಎಸ್ ಶಾಸಕರ ಒಂದು ತಿಂಗಳ ಸಂಬಳ ನೀಡಲಾಗ್ತಿದೆ. ಸಂತ್ರಸ್ತರಿಗೆ ಅಗತ್ಯವಾದ ವಸ್ತುಗಳನ್ನ ಜೆಡಿಎಸ್ನಿಂದ ಕಳಿಸಿಕೊಡಲಾಗ್ತಿದೆ ಎಂದರು.
ಉತ್ತರ ಕರ್ನಾಟಕದತ್ತ ಗಮನ
ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಮ್ಮ ಪಕ್ಷದ ಕಡೆಯಿಂದ ಉ. ಕರ್ನಾಟಕಕ್ಕೆ ಹೋಗ್ಬೇಕು ಅಂತ ನಿರ್ಧಾರ ಮಾಡಿದ್ದೇವೆ. ವರಿಷ್ಠರ ಸೂಚನೆ ಮೂಲಕ 5 ಲಾರಿಗಳ ಮೂಲಕ ಹೋಗ್ತಿದ್ದೇವೆ. ನಾವು ಅವರ ಪರ ನಿಂತು ಕೆಲಸ ಮಾಡುತ್ತೇವೆ. ಹುಬ್ಬಳ್ಳಿಯಿಂದ ಶುರು ಮಾಡಿ ಯಾದಗಿರಿ ಕಡೆ ಹೋಗುತ್ತೇವೆ. ಸಾಕಷ್ಟು ಭಾಗಗಳಿಂದ ಆಹಾರ ಪದಾರ್ಥಗಳು ಆಯಾ ಡಿಸಿ ಕಚೇರಿಗೆ ಹೋಗಿವೆ. ಡಿಸಿ ಕಚೇರಿಯಿಂದ ಪರಿಹಾರ ಕೇಂದ್ರಗಳಿಗೆ ಸಾಮಾಗ್ರಿಗಳನ್ನ ತಲುಪಿಸುತ್ತೇವೆ ಎಂದು ಹೇಳಿದರು.