ಬೆಂಗಳೂರು : ರಾಜ್ಯದಲ್ಲಿ ಖಾಲಿ ಇರುವ 7 ವಿಧಾನಪರಿಷತ್ ಸ್ಥಾನಗಳಲ್ಲಿ ಒಂದನ್ನು ಮಾತ್ರ ಗೆಲ್ಲುವ ಅವಕಾಶ ಜೆಡಿಎಸ್ಗಿದೆ. ಹೀಗಾಗಿ, ನಾಲ್ಕು ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ಗೆಲ್ಲುವ ಭರವಸೆಯಿಲ್ಲದಿದ್ದರೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಲಹೆಯಂತೆ ನಡೆಯಲು ಪಕ್ಷವು ನಿರ್ಧರಿಸಿದೆ.
ಈ ಹಿಂದೆ ದೇವೇಗೌಡರಿಗಾಗಿ ರಾಜ್ಯಸಭೆ ಸ್ಥಾನ ತ್ಯಾಗ ಮಾಡಿದ್ದ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರ ಹೆಸರು ಮತ್ತೊಮ್ಮೆ ಮುನ್ನೆಲೆಗೆ ಬರುತ್ತಿದೆ. ಅವರು ಸರ್ವಸಮ್ಮತ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಏಕೆಂದರೆ, ಕುಪೇಂದ್ರ ರೆಡ್ಡಿ ಬಳಿ ಅಗತ್ಯ ಸಂಪನ್ಮೂಲವಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನಪರಿಷತ್ ಹಾಗೂ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ದೇವೇಗೌಡರಿಗೆ ನೀಡಲು ಇತ್ತೀಚೆಗೆ ದೇವನಹಳ್ಳಿ ಸಮೀಪದ ಖಾಸಗಿ ರೆಸಾರ್ಟ್ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾಗಿ, ಜೂನ್ 3ರಂದು ವಿಧಾನಪರಿಷತ್ ಮತ್ತು ಜೂನ್ 10ರಂದು ರಾಜ್ಯಸಭೆ ಚುನಾವಣೆಗಾಗಿ ಜೆಡಿಎಸ್ ಕಾರ್ಯತಂತ್ರ ರೂಪಿಸಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಹೆಚ್ಚುವರಿ ಮತಗಳನ್ನು ಪಡೆಯಲು ಬಿಜೆಪಿ ಅಥವಾ ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಚರ್ಚಿಸುವ ಸಾಧ್ಯತೆಯಿದೆ ಎಂದು ಕೆಲವು ಎಂಎಲ್‌ಸಿ ಆಕಾಂಕ್ಷಿಗಳು ನಿರೀಕ್ಷಿಸುತ್ತಿದ್ದಾರೆ. ಮತ್ತೊಮ್ಮೆ ವಿಧಾನಪರಿಷತ್ ಪ್ರವೇಶಿಸಲು ಟಿ ಎ ಶರವಣ ಉತ್ಸಾಹ ತೋರಿದ್ದು, ಪರಿಷತ್ಗೆ ಅಭ್ಯರ್ಥಿ ಮಾಡುವಂತೆ ವರಿಷ್ಠರ ಬಳಿ ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಜೆಡಿಎಸ್‌ನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಆರ್.ಪ್ರಕಾಶ್ ಅವರನ್ನು ಪಕ್ಷವು ಅಚ್ಚರಿಯ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಎರಡೂ ಚುನಾವಣೆಯಲ್ಲಿ ಜೆಡಿಎಸ್ ನಡೆ ಇನ್ನೂ ನಿಗೂಢವಾಗಿದ್ದು, ಜೆಡಿಎಸ್ ವರಿಷ್ಠ ದೇವೇಗೌಡರ ನಿರ್ಧಾರದ ಮೇಲೆ ಅವಲಂಬಿಸಿದೆ.
ಇದನ್ನೂ ಓದಿ: ಮಾಗಡಿಯಲ್ಲಿ ನನ್ನ ಬದಲು ರೇವಣ್ಣಗೆ ಟಿಕೆಟ್ ನೀಡಿ: ಡಿಕೆಶಿಗೆ ಬಾಲಕೃಷ್ಣ ಪತ್ರ