ಬೆಂಗಳೂರು: ವಿಧಾನಸೌಧಕ್ಕೆ ಹಿಡಿದಿರುವ ಗ್ರಹಣ ಹೋಗಲಾಡಿಸಲು 80 ದಿನಗಳ ನಂತರ ನವಗ್ರಹ ಪೂಜೆ ಮಾಡಿ, ಪಾಪ ತೊಳೆಯುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು, ನಮ್ಮ ಪಂಚರತ್ನ ರಥಯಾತ್ರೆಯನ್ನು ನವಗ್ರಹಕ್ಕೆ ಹೋಲಿಸಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸಿಡಿ ಪ್ರಕರಣದ ಪಾಪ ತೊಳೆಯಬೇಕಿದೆ ಎಂದು ತಿರುಗೇಟು ನೀಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪಕ್ಕದಲ್ಲೇ ಸಿ.ಡಿ.ಪ್ರಕರಣದ ಆರೋಪಿಗಳು ಕುಳಿತಿದ್ದಾರೆ. ಇದು ಅವರಿಗೆ ಗೌರವ ಕೊಡುತ್ತದೆಯೇ ಎಂದು ಪ್ರಶ್ನಿಸಿದರು.
ಟಿಪ್ಪು ವಿರುದ್ಧ ಹೇಳಿಕೆ ಸರಿಯಲ್ಲ: ಟಿಪ್ಪು ವಿಚಾರದಲ್ಲಿ ಬಿಜೆಪಿ ಮುಖಂಡರು ಒಬ್ಬೊಬ್ಬರು ಒಂದೊಂದು ರೀತಿ ಹೇಳಿದ್ದಾರೆ. ರಾಷ್ಟ್ರಪತಿಯಾಗಿದ್ದ ರಾಮನಾಥ್ ಕೋವಿಂದ್ ಅವರೇ ಟಿಪ್ಪು ಅವರ ಗುಣಗಾನ ಮಾಡಿದ್ದಾರೆ. ಕೇಂದ್ರ ಸರ್ಕಾರದ ವಸ್ತು ಸಂಗ್ರಹಾಲಯದಲ್ಲಿ ಟಿಪ್ಪುವಿಗೆ ಗೌರವ ಕೊಟ್ಟಿದ್ದಾರೆ ಎಂದು ಹೇಳಿದರು. ಸಚಿವ ಅಶ್ವತ್ಥನಾರಾಯಣ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸ್ವಯಂ ದೂರು ದಾಖಲಿಸಬೇಕು ಎಂದು ಆಗ್ರಹಿಸಿದರು. ಸಚಿವರ ವಿರುದ್ಧ ಕ್ರಮ ಕೈಗೊಂಡರೆ ರಾಜ್ಯಕ್ಕೂ ಗೌರವ ಬರುತ್ತದೆ. ಇತಿಹಾಸ ಗೊತ್ತಿಲ್ಲದವರು ಪಠ್ಯಪುಸ್ತಕ, ಸ್ಮಾರ್ಥ, ಮಾಧ್ವರ ಬಗ್ಗೆ ಮಾತನಾಡುತ್ತಾರೆ. ಜಾತಿ, ಹಿಜಾಬ್, ಜಲ್ಲಿಕಟ್ಟು, ಹಲಾಲ್ ವಿಚಾರ ಬಿಟ್ಟು ಚುನಾವಣೆ ಸಂದರ್ಭದಲ್ಲಿ ವಿಷಯಾಧಾರಿತ ಚರ್ಚೆ ನಡೆಯಲಿ ಎಂದು ಹೇಳಿದರು.
ಅಶ್ವತ್ಥ ನಾರಾಯಣ ವಿರುದ್ಧ ಪ್ರಕರಣ ದಾಖಲಿಸಬೇಕು: ಸಿದ್ದರಾಮಯ್ಯ ಅವರನ್ನು ಟಿಪ್ಪುವನ್ನು ಹೊಡೆದು ಹಾಕಿದ ಹಾಗೆಯೇ ಹೊಡೆದು ಹಾಕಬೇಕು ಎಂಬ ಸಚಿವ ಅಶ್ವತ್ಥ ನಾರಾಯಣ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸಿ.ಎಂ.ಇಬ್ರಾಹಿಂ, ಅಶ್ವಥ್ ನಾರಾಯಣ್ಗೆ ಏನಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎನ್ನುವುದು ತಪ್ಪು. ಸಿದ್ದರಾಮಯ್ಯ ಬೇರೆ ಪಕ್ಷದಲ್ಲಿ ಇರಬಹುದು. ಆದರೆ, ಅವರು ವಿರೋಧ ಪಕ್ಷದ ನಾಯಕರು. ಈ ಸಂಬಂಧ ಡಿಜಿಯವರು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ನಿನ್ನೆ ಸಿದ್ದರಾಮಯ್ಯ ಟೀಕಿಸಿದ್ದ ಇಬ್ರಾಹಿಂ: ನಿನ್ನೆ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಕುರಿತು ಮಾತನಾಡಿದ್ದ ಸಿ.ಎಂ.ಇಬ್ರಾಹಿಂ, ಸಿದ್ದರಾಮಯ್ಯ ರಾಜಕಾರಣದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರ ಇದಾಗಿದೆ ಎಂದಿದ್ದರು. ಮುಂಬರುವ ಚುನಾವಣೆ ಸಿದ್ದರಾಮಯ್ಯ ಕೊನೇಯ ಚುನಾವಣೆ ಆಗಿರಲಿದೆ. ಅವರು ಇಲ್ಲಿಯ ಬದಲು ಬೇರೆ ಎಲ್ಲದರೂ ನಿಂತ್ರೆ ಗೆಲುತ್ತಾರೆ. ಈ ಸಂಬಂಧ ಅವರಿಗೆ ಫೋನ್ ಮಾಡಿ ಹೇಳುತ್ತೇನೆ. ಯಾವ ಕ್ಷೇತ್ರ ಎಂದು ಬಹಿರಂಗಪಡಿಸುವುದಿಲ್ಲ. ನಮ್ಮ ಮಾತು ಕೇಳಿ ಅವರು ಚುನಾವಣೆಗೆ ನಿಲ್ಲುತ್ತಿದ್ರೆ ಗೆಲ್ಲುತ್ತಿದ್ದರು. ಆದರೆ, ಇದೀಗ ಅವರು ನಮ್ಮ ಜೊತೆ ಇಲ್ಲ ಎಂದ ಅವರು ಸಿದ್ದರಾಮಯ್ಯ ಸ್ವಾರ್ಥಿ, ಯಾರನ್ನೂ ಬೆಳೆಯಲು ಅವಕಾಶ ನೀಡುವುದಿಲ್ಲ ಎಂದು ಟೀಕಿಸಿದ್ದರು. ಇದೇ ವೇಳೆ ಈ ಬಾರಿ ಜೆಡಿಎಸ್ ಬಹುಮತ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಹಾತ್ಮ ಗಾಂಧೀಜಿಯವರನ್ನೇ ಕೊಂದವರಿವರು, ಆರ್ಎಸ್ಎಸ್ನವರು ಈ ರೀತಿ ಹೇಳಿಸಿದ್ದಾರೆ: ಸಿದ್ದರಾಮಯ್ಯ ಕಿಡಿ