ಬೆಂಗಳೂರು : ಕೋವಿಡ್-19 ಕರ್ತವ್ಯಕ್ಕೆ ಶಿಕ್ಷಕರು, ಉಪನ್ಯಾಸಕರನ್ನು ನಿಯೋಜಿಸುವಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಉಲ್ಲಂಘಿಸಿದೆ ಎಂದು ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಆರೋಪಿಸಿದ್ದಾರೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿರುವ ಅವರು, ಕೋವಿಡ್-19 ರ ಕರ್ತವ್ಯಕ್ಕೆ ಬೂತ್ ಮಟ್ಟದ ತಂಡವನ್ನು ರಚಿಸಲಾಗಿದೆ. ಈ ಕರ್ತವ್ಯಕ್ಕೆ ಶಿಕ್ಷಕರು ಮತ್ತು ಉಪನ್ಯಾಸಕರನ್ನು ತೆಗೆದುಕೊಂಡಿರುವುದು ಸರಿಯಷ್ಟೇ. ಆದರೆ ಈ ಕರ್ತವ್ಯಕ್ಕೆ ತೆಗೆದುಕೊಂಡಿರುವ ನೌಕರರಲ್ಲಿ ನಿಧನರಾಗಿರುವವರು, 50 ವರ್ಷ ಮೇಲ್ಪಟ್ಟವರು, ಮಧುಮೇಹ, ಮೂತ್ರಪಿಂಡ ಕಾಯಿಲೆ, ಉಸಿರಾಟದ ತೊಂದರೆ ಹಾಗೂ ಇನ್ನಿತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಅನೇಕ ಶಿಕ್ಷಕರು ಮತ್ತು ಉಪನ್ಯಾಸಕರು ಈ ಪಟ್ಟಿಯಲ್ಲಿದ್ದಾರೆ.
ಭಾರತ ಸರ್ಕಾರದ ಮುಂಜಾಗ್ರತಾ ಕ್ರಮಗಳಲ್ಲಿ ಈ ಮೇಲೆ ತಿಳಿಸಿದ ನೌಕರರಿಗೆ ವಿನಾಯಿತಿಗಳನ್ನು ನೀಡಲಾಗಿದೆ. ಆದರೆ ರಾಜ್ಯ ಸರ್ಕಾರವು ಭಾರತ ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ವಯೋಮಿತಿ ಮೀರಿದ ಮತ್ತು ವಿವಿಧ ಗಂಭೀರ ಕಾಯಿಲೆಗಳಿಗೆ ತುತ್ತಾಗಿರುವ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ವಿನಾಯಿತಿ ನೀಡದೆ ಬೂತ್ ಮಟ್ಟದ ತಂಡ ರಚಿಸಿರುವುದನ್ನು ಗಮನಿಸಿದರೆ ಸರ್ಕಾರವೇ ರೋಗ ನಿಯಂತ್ರಣದ ಬದಲು ರೋಗ ಹರಡಲು ಹೊರಟಿರುವಂತೆ ಕಾಣುತ್ತದೆ ಎಂದು ದೂರಿದ್ದಾರೆ.
ಆದ್ದರಿಂದ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ವಯಸ್ಕ ಮತ್ತು ಗಂಭೀರ ಕಾಯಿಲೆಗಳಿಗೆ ತುತ್ತಾಗಿರುವ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಕೋವಿಡ್-19 ಕರ್ತವ್ಯದಿಂದ ವಿನಾಯಿತಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.