ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾರಣ ಜೆಡಿಎಸ್ ತಳಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಿದೆ.
ಚುನಾವಣಾ ಸೋಲಿನಿಂದ ಧೃತಿಗೆಡದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲೂ ನಿರಂತರ ಸಭೆ, ಸಮಾವೇಶ ನಡೆಸಲು ಮುಂದಾಗಿದ್ದಾರೆ. ಪಕ್ಷ ಸಂಘಟನೆಗಾಗಿ 'ವಿಕಾಸ ಮತ್ತು ವಿಶ್ವಾಸ' ಎಂಬ ಹೆಸರಿನಲ್ಲಿ ಪಾದಯಾತ್ರೆ ನಡೆಸಲು ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ತಳಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ಯುವಕರನ್ನು ಸೆಳೆಯುವ ಉದ್ದೇಶದಿಂದ ಆಗಸ್ಟ್‌ನಿಂದ ಎರಡು ಹಂತದಲ್ಲಿ ರಾಜ್ಯಾದ್ಯಂತ ಪಾದಯಾತ್ರೆ ನಡೆಸಲು ಪೂರ್ವತಯಾರಿ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಜೂನ್ 29 ರಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ. ದತ್ತ ನೇತೃತ್ವದಲ್ಲಿ ಪೂರ್ವ ಸಿದ್ದತಾ ಸಭೆ ನಡೆಯಲಿದೆ.
ಪಕ್ಷ ಸಂಘಟನೆಗೆ ಸರಣಿ ಸಭೆ:
ಈ ನಡುವೆ ದೇವೇಗೌಡರ ನೇತೃತ್ವದಲ್ಲಿ ಸರಣಿ ಸಭೆಗಳು ಈಗಾಗಲೇ ಆರಂಭವಾಗಿವೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದವರು ಹಾಗೂ ಸೋತವರ ಸಭೆ ನಡೆಸಲಾಗಿದೆ. ಕಳೆದ ವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಉಪ್ಪಾರ ಸಮುದಾಯದವರ ಸಭೆ ನಡೆಸಿದ್ದು, ನಿನ್ನೆಯಷ್ಟೇ ಜೆಡಿಎಸ್ ಮಹಿಳಾ ಘಟಕಗಳ ಜೊತೆ ಸಭೆ ನಡೆಸಿ, ಮಹಿಳಾ ರಾಜ್ಯಾಧ್ಯಕ್ಷರ ನೇಮಕ ಮಾಡುವ ಕುರಿತು ಅಭಿಪ್ರಾಯ ಸಂಗ್ರಹಿಸಿದ್ಧಾರೆ.
ಜುಲೈನಲ್ಲಿ ಮಹಿಳಾ ಸಮಾವೇಶ ನಡೆಸಲು ಉದ್ದೇಶಿಸಿರುವ ದೇವೇಗೌಡರು, ಮಹಿಳಾ ಜಿಲ್ಲಾ ಘಟಕಗಳನ್ನು ರಚನೆ ಮಾಡಿ ಕಾರ್ಯಾಧ್ಯಕ್ಷರು, ಅಧ್ಯಕ್ಷರನ್ನು ನೇಮಕ ಮಾಡುವುದಾಗಿ ಹೇಳಿದ್ದಾರೆ.