ಬೆಂಗಳೂರು : 2023ರ ವಿಧಾನಸಭೆ ಚುನಾವಣೆಯಲ್ಲಿ ಹೊಸ ರಾಜಕೀಯ ಭವಿಷ್ಯ ಬರೆಯಲು ಸಜ್ಜಾಗುತ್ತಿರುವ ಜೆಡಿಎಸ್, ಈಗಾಗಲೇ ತಂತ್ರ -ಪ್ರತಿತಂತ್ರ ಹೂಡಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಕಟ್ಟಿ ಹಾಕಲು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪ್ಲಾನ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೊಡುಗೆ, ಮುಸ್ಲಿಮರ ರಕ್ಷಣೆ ಬಗ್ಗೆ ಕೆಲವು ಪ್ರಶ್ನೆಗಳನ್ನು ಮುಂದಿಡಲು ಯೋಚಿಸಿದ್ದಾರೆ ಎನ್ನಲಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಕೈ ವಿರುದ್ಧ ದಳಪತಿಗಳು ರಾಜಕೀಯ ಸೂತ್ರ ಹೆಣೆದಿದ್ದಾರೆ. ಬರುವ ಚುನಾವಣೆಯಲ್ಲಿ 'ಧರ್ಮದ ಅಸ್ತ್ರ' ಪ್ರಯೋಗಿಸಲು ಮುಂದಾಗಿರುವ ಅವರು, ಕಾಂಗ್ರೆಸ್‌ಗೆ ಪೆಟ್ಟು ಕೊಡಲು ವ್ಯೂಹ ರಚಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್ನಲ್ಲಿದ್ದ ಸಿ ಎಂ ಇಬ್ರಾಹಿಂ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ.
ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಸ್ಥಾನಮಾನ ನೀಡುವ ಮೂಲಕ ತಿರುಗೇಟು ನೀಡುವುದು ದಳಪತಿಗಳ ಉದ್ದೇಶವಾಗಿದೆ. ಈ ಹಿಂದೆ ಮಿರಾಜುದ್ದೀನ್ ಪಟೇಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದ ಸಂದರ್ಭದಲ್ಲಿ ಜೆಡಿಎಸ್‌ಗೆ ಸಮುದಾಯದ ಮುಖಂಡರ ಬೆಂಬಲ ದೊರೆತಿದ್ದಲ್ಲದೇ ಪಕ್ಷಕ್ಕೆ ಅಧಿಕಾರ ಕೂಡ ಸಿಕ್ಕಿತ್ತು. ಅದೇ ತಂತ್ರಗಾರಿಕೆ ಬಳಸಿ ಈ ಬಾರಿಯೂ ಕೂಡ ಅಧಿಕಾರದ ಚುಕ್ಕಾಣಿ ಹಿಡಿಯುವುದು ಜೆಡಿಎಸ್ನ ಲೆಕ್ಕಾಚಾರ. ಹಾಗಾಗಿ, ಇಬ್ರಾಹಿಂ ಅವರನ್ನು ಪಕ್ಷಕ್ಕೆ ಕರೆತಂದು ತಳಮಟ್ಟದಿಂದ ಪಕ್ಷ ಸಂಘಟಿಸುವ ಹೊಣೆಗಾರಿಕೆಯನ್ನು ನೀಡಲು ಮುಂದಾಗಿದೆ.
![JDS next 2023 election plan](https://etvbharatimages.akamaized.net/etvbharat/prod-images/15057881_thum.jpg)
ಅಲ್ಪಸಂಖ್ಯಾತರ ಮತಗಳ ಗುರಿ : 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತ ಮತಗಳೇ ಪ್ರಮುಖವಾಗಿವೆ. ಈ ಅಸ್ತ್ರ ಅರಿತಿರುವ ಕುಮಾರಸ್ವಾಮಿ ಅವರು ಹೊಸ ಬಾಣ ಹೂಡಲು ತಯಾರಿ ನಡೆಸಿದ್ದಾರೆ. ಮುಸ್ಲಿಂ ಧರ್ಮಗುರುಗಳ ಮುಂದೆ ಕಾಂಗ್ರೆಸ್ ಕೊಡುಗೆ, ಮುಸ್ಲಿಂಮರ ರಕ್ಷಣೆ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಲು ಮುಂದಾಗುವರೆಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಕಾಂಗ್ರೆಸ್‌ನ ಮತ ಬ್ಯಾಂಕ್‌ಗೆ ಕೈ ಹಾಕಲು ದಳಪತಿಗಳು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಕೈನ ಸಂಪ್ರದಾಯದ ಮತಗಳನ್ನು ತನ್ನತ್ತ ಸೆಳೆಯಲು ಪ್ಲಾನ್ ಮಾಡುತ್ತಿದ್ದಾರೆ. ಸಿ ಎಂ ಇಬ್ರಾಹಿಂ ಅವರು ಪಕ್ಷಕ್ಕೆ ಸೇರುವ ಮುನ್ನವೇ ಹಲವು ಮುಸ್ಲಿಂ ಮುಖಂಡರು ಹಾಗೂ ಧರ್ಮಗುರುಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರಲ್ಲದೆ, ಶಿವಾಜಿನಗರ ಮಾಜಿ ಶಾಸಕ ರೋಷನ್ ಬೇಗ್ ಅವರ ಜೊತೆಗೂ ಮಾತುಕತೆ ನಡೆಸಿದ್ದರು.
ಅವರನ್ನು ಸಹ ಪಕ್ಷಕ್ಕೆ ಸೆಳೆಯಲು ದಳಪತಿಗಳು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ಮೂರು ಪಕ್ಷಗಳ ನಾಯಕರು ಸಮುದಾಯಗಳ ಓಲೈಕೆಗೆ ಮುಂದಾಗಿರುವುದು ತಿಳಿದ ವಿಚಾರವೆ.
ಸಿದ್ದಾಂತ ಕೇಂದ್ರಿತ ನಾಯಕರನ್ನು ಸೆಳೆಯುವ ಪ್ರಯತ್ನ : ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಹಂಚಿಕೊಳ್ಳುವ ಮತ್ತೊಂದು ಪ್ರಮುಖ ಮತಬ್ಯಾಂಕ್ ಜಾತ್ಯಾತೀತ ಮತ, ಪ್ರಗತಿಪರರೆಂದು ಗುರುತಿಸಿಕೊಳ್ಳುವ ಎಡಪಂಥೀಯ ವಿಚಾರಧಾರೆಯ ನಾಯಕರು, ಸಾಹಿತಿಗಳು ಹಾಗೂ ಅವರ ಅನುಯಾಯಿಗಳ ಬೆಂಬಲ ಹಾಗೂ ಮತ ವಿಭಜನೆಯಾಗುವ ಸಾಧ್ಯತೆ ಲೆಕ್ಕ ಹಾಕಿರುವ ಕುಮಾರಸ್ವಾಮಿ ಅವರು, ಮುಂದಿನ ದಿನಗಳಲ್ಲಿ ಸಿದ್ಧಾಂತ ಕೇಂದ್ರಿತ ನಾಯಕರನ್ನು ಸೆಳೆಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಪಕ್ಷ ತೊರೆಯುವವರ ಮೇಲೆ ಕಣ್ಣು : ಜೆಡಿಎಸ್ನಿಂದ ಗೆದ್ದು ಬಿಜೆಪಿಗೆ ಹೋಗಿರುವ ಮತ್ತು ಕಾಂಗ್ರೆಸ್‌ಗೆ ಹೋಗುತ್ತಿರುವ ಶಾಸಕರ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಲು ಜೆಡಿಎಸ್ ಯೋಜನೆ ರೂಪಿಸುತ್ತಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಕೋಲಾರದ ಶ್ರೀನಿವಾಸ್ ಗೌಡ, ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ (ವಾಸು) ಅವರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿವೆ. ಆ ಕ್ಷೇತ್ರಗಳ ಮೇಲೂ ಹಿಡಿತ ಸಾಧಿಸಲು ದಳಪತಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಪ್ರಕರಣದಲ್ಲಿ ವಿಡಿಯೋ, ಸಾಕ್ಷಿಗಳ ಆಧಾರದಲ್ಲಿ ತನಿಖೆ ನಡೆಯುತ್ತಿದೆ : ಸಿಎಂ ಬೊಮ್ಮಾಯಿ