ಬೆಂಗಳೂರು: ಜೆಡಿಎಸ್ನ ವಿಧಾನ ಪರಿಷತ್ ಸದಸ್ಯರ ಅಸಮಾಧಾನ ಶಮನಗೊಳಿಸಲು ಮಾಜಿ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ.
ಇಂದು ಸಂಜೆ ತಮ್ಮ ಪಕ್ಷದ ವಿಧಾನ ಪರಿಷತ್ ಸದಸ್ಯರ ಜತೆ ಪಕ್ಷದ ವರಿಷ್ಠ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ಹೆಚ್.ಡಿ. ದೇವೇಗೌಡರ ನಿವಾಸದಲ್ಲಿ ಸಭೆ ನಡೆಯಲಿದೆ. ಕುಮಾರಸ್ವಾಮಿ ಮೇಲೆ ಪರಿಷತ್ ಸದಸ್ಯರು ಅಸಮಾಧಾನಗೊಂಡಿರುವ ಹಿನ್ನೆಲೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಭೆ ನಡೆಸಲಾಗುತ್ತಿದೆ.
ಮೈತ್ರಿ ಸರ್ಕಾರ ಇದ್ದಾಗ ಕುಮಾರಸ್ವಾಮಿ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಹಿರಿಯರನ್ನು, ಪರಿಷತ್ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ. ಹೆಚ್ಡಿಕೆ ಮತ್ತು ದೇವೇಗೌಡರೇ ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಜೆಡಿಎಸ್ ಪರಿಷತ್ ಸದಸ್ಯರ ಅತೃಪ್ತಿಯಾಗಿತ್ತು. ಈ ಸಂಬಂಧ ಪ್ರತ್ಯೇಕ ಸಭೆ ನಡೆಸಿ ಕುಮಾರಸ್ವಾಮಿ ಕಾರ್ಯವೈಖರಿ ಬಗ್ಗೆ ಪರಿಷತ್ ಸದಸ್ಯರು ನೇರವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಕುಮಾರಸ್ವಾಮಿ ಹಾಗೂ ದೇವೇಗೌಡರು ಅಸಮಾಧಾನ ಶಮನಗೊಳಿಸಲು ಮುಂದಾಗಿದ್ದಾರೆ. ಇಂದಿನ ಸಭೆಯಲ್ಲಿ ಎಂಎಲ್ ಸಿಗಳ ಅಸಮಾಧಾನ ಶಮನ ಮಾಡಲು ಯತ್ನಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಮುಂಚೆ ದೇವೇಗೌಡರು ಪರಿಷತ್ ಸದಸ್ಯರಿಗೆ ಕುಮಾರಸ್ವಾಮಿ ಜೊತೆ ಮಾತನಾಡಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದರು. ಇದೀಗ ಅತೃಪ್ತ ಪರಿಷತ್ ಸದಸ್ಯರ ಜತೆ ಸಭೆ ನಡೆಸಿ ಡ್ಯಾಮೇಜ್ ಕಂಟ್ರೋಲ್ ಗೆ ಕುಮಾರಸ್ವಾಮಿ ಮುಂದಾಗಿದ್ದಾರೆ.