ಬೆಂಗಳೂರು: ನೈಸ್ ರಸ್ತೆ ನಿರ್ಮಾಣ ಅಕ್ರಮ ಕುರಿತ ಚರ್ಚೆ ವೇಳೆ ಕಾನೂನು ಮತ್ತು ಲೋಕೋಪಯೋಗಿ ಸಚಿವರು ಇರಲೇ ಬೇಕು ಎಂದು ಜೆಡಿಎಸ್ ಸದಸ್ಯ ಭೋಜೇಗೌಡ ಆಗ್ರಹಿಸಿದರು. ವಿಧಾನಪರಿಷತ್ನಲ್ಲಿ ನಿಯಮ 68ರ ಅಡಿ ನೈಸ್ ರಸ್ತೆ ಅಕ್ರಮ ವಿಚಾರವಾಗಿ ಚರ್ಚೆ ಮುಂದುವರಿಸಿ ಭೋಜೇಗೌಡ ಮಾತನಾಡಿ, ಇಲ್ಲಿ ಹಗಲು ದರೋಡೆ ಆಗಿದೆ. ತೆಲಗಿ ಛಾಪಾ ಕಾಗದ ಹಗರಣಕ್ಕಿಂತ ದೊಡ್ಡ ಹಗರಣ ಇದಾಗಲಿದೆ ಎಂದು ದೇವೇಗೌಡರು ಹೇಳಿದ್ದರು. ಅದೇ ಆಗಿದೆ ಎಂದರು.
99ರ ಬಳಿಕ ಯಾವುದೇ ಭೂಮಿ ಕಬಳಿಕೆ ಆಗಿಲ್ಲ: ಆಗ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, 1995ರಲ್ಲಿ ಯೋಜನೆಗೆ ಚಾಲನೆ ಸಿಗುತ್ತದೆ. 1999ರಿಂದ 2022ರ ಅವಧಿಯಲ್ಲಿ ಯಾವುದೇ ರೀತಿ ಹೊಸ ಭೂಮಿಯ ಬಳಕೆ ಆಗಿಲ್ಲ. ಹೆಚ್ಚುವರಿ ಒತ್ತುವರಿ ಆಗಿಲ್ಲ ಎಂದರು. ನಂತರ ಬಿಜೆಪಿ ಸದಸ್ಯ ಮುನಿರಾಜುಗೌಡ ಮಾತನಾಡಿ, ನಮ್ಮ 40 ಎಕರೆ ಭೂಮಿ ವಶಕ್ಕೆ ಪಡೆಯುವ ಕಾರ್ಯ ಆಗಿದೆ. ನಮಗೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಭೂಮಿಗೆ ಬೇಲಿ ಹಾಕಿಕೊಳ್ಳಲು ಹೋದರೆ ನೈಸ್ ಕಂಪನಿ ಸದಸ್ಯರು ಬಂದು ಗಲಾಟೆ ಮಾಡುತ್ತಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಗ ಬರುತ್ತದೆ. ಅಧಿಕಾರಿಗಳು ಶಾಮೀಲಾಗಿದ್ದಾರೆ. ನಮ್ಮಪ್ಪ ಮಾಡಿಟ್ಟ ಜಮೀನು ಬಳಕೆಗೆ ನಾವೇಕೆ ನೈಸ್ ಕಂಪನಿ ಕೇಳಬೇಕು. ಪರಿಹಾರವೂ ಇಲ್ಲ, ಬಳಕೆಗೂ ಸಿಗುತ್ತಿಲ್ಲ. ನಮ್ಮ ಕಷ್ಟ ಯಾರಿಗೆ ಹೇಳೋಣ ಎಂದರು.
ರೈತರಿಗೆ ನ್ಯಾಯ ಒದಗಿಸಿ ಎಂದ ಸದಸ್ಯರು: ಬಳಿಕ ಭೋಜೇಗೌಡ ಮಾತು ಮುಂದುವರಿಸಿ, ಸರ್ಕಾರ ಕೂಡಲೇ ಯೋಜನೆಯನ್ನು ವಾಪಸ್ ಪಡೆದು ನೈಸ್ ರಸ್ತೆಯಿಂದ ಅವಕಾಶ ಹಿಂಪಡೆಯಿರಿ, ರೈತರಿಗೆ ನ್ಯಾಯ ಒದಗಿಸಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು. ಜೆಡಿಎಸ್ ಸದಸ್ಯ ರಮೇಶ್ ಗೌಡ ಮಾತನಾಡಿ, ನೋಡಲು ಮಾತ್ರ ನೈಸ್ ಆದರೆ ತುಂಬಾ ಹಾರ್ಡ್. ರಾಜ್ಯದ ರೈತರಿಗೆ ಅನುಕೂಲ ಆಗಲಿ, ಜನರಿಗೆ ಉತ್ತಮ ರಸ್ತೆ ಯೋಜನೆ ಸಿಗಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಯೋಜನೆಗೆ ಎಂಒಯು ಮಾಡಿದ್ದರು.
ಆದರೆ, ನಂತರ ಬಂದ ಸರ್ಕಾರಗಳು ನೈಸ್ ರಸ್ತೆ ಯೋಜನೆ ಅಕ್ರಮಕ್ಕೆ ಕ್ರಮ ಕೈಗೊಂಡಿಲ್ಲ. ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಮಾಡಿರುವ ಕೆಲಸದ ವಿರುದ್ಧ ಸೂಕ್ತ ಕ್ರಮ ಆಗಬೇಕು. ದೇವೇಗೌಡರ ನಂತರ ಅಧಿಕಾರಕ್ಕೆ ಬಂದ ಎಲ್ಲರೂ ನೈಸ್ ಕಂಪನಿಗೆ ಸಹಕಾರ ನೀಡಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿ, ಒಪ್ಪಂದದಲ್ಲಿ ಇರುವ ಯಾವ ನಿಯಮವನ್ನು ಅನುಸರಿಸುತ್ತಿಲ್ಲ ಎಂದರು.
ಸಭಾಪತಿಗಳ ಪೀಠದಲ್ಲಿದ್ದ ಭಾರತಿ ಶೆಟ್ಟಿ ಅವರು ಚರ್ಚೆಗೆ ಶ್ರೀಕಂಠೇಗೌಡರನ್ನು ಆಹ್ವಾನಿಸಿದರು. ಆದರೆ ಗಂಭೀರ ವಿಚಾರ ಆಗಿದ್ದು, ಪ್ರತಿಪಕ್ಷ ಗ್ಯಾಲರಿಯಲ್ಲಿ ಸದಸ್ಯರ ಕೊರತೆ ಇದೆ. ಮಾತನಾಡುವುದು ಸರಿಯಲ್ಲ. ವಿಚಾರ ಪ್ರಸ್ತಾಪಿಸುತ್ತೇನೆ ಎಂದರು. ಮೈಸೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಪಘಾತ ಹೆಚ್ಚಾಗುತ್ತಿದ್ದ ಸಮಸ್ಯೆ ಗಮನಿಸಿ, ಪರ್ಯಾಯ ಮಾರ್ಗ ನಿರ್ಮಿಸುವ ಚಿಂತನೆ ನಡೆಸಿ ಈ ನೈಸ್ ರಸ್ತೆ ಯೋಜನೆಗೆ ಗಮನ ಹರಿಸುತ್ತಾರೆ. ಮೂರು ವಿದೇಶಿ ಕಂಪನಿ ಇದರ ನಿರ್ಮಾಣದ ಟೆಂಡರ್ ಪಡೆಯುತ್ತಾರೆ. ಆದರೆ ಮಾರನೇ ವರ್ಷವೇ ಹಳೆ ಟೆಂಡರ್ ರದ್ದಾಗಿ ನೈಸ್ ಸಂಸ್ಥೆ ಬಂದು ಕೂರುತ್ತದೆ. ಇದರ ಇನ್ನಷ್ಟು ಮಾಹಿತಿ ನಾಳೆ ನೀಡುತ್ತೇನೆ ಎಂದರು.
ಇದನ್ನೂ ಓದಿ: ಛತ್ರ ಬುಕ್ ಮಾಡಿ ಬರುತ್ತಿದ್ದಾಗಲೇ ಟ್ರಾನ್ಸ್ಫಾರ್ಮರ್ ಸ್ಫೋಟ: ಚಿಕಿತ್ಸೆ ಫಲಿಸದೇ ಅಪ್ಪ, ಮಗಳು ಸಾವು