ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್. ಡಿ. ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಮುಖಂಡರ ಸಭೆ ನಡೆಯುತ್ತಿದೆ.
ಬೆಂಗಳೂರಿನ ಎಲ್ಲಾ ವಾರ್ಡ್ನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಜೊತೆ ಸಭೆ ನಡೆಸುತ್ತಿರುವ ಗೌಡರು ನಗರದಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕೆಲವೇ ತಿಂಗಳಲ್ಲಿ ಎದುರಾಗಲಿರುವ ಬಿಬಿಎಂಪಿ ಚುನಾವಣೆ ಸಮಯಕ್ಕೆ ಪಕ್ಷ ಬಲಪಡಿಸಿಕೊಳ್ಳುವ ಹಾಗೂ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮುಖಂಡರ ಜೊತೆ ಮಾತುಕತೆ ನಡೆಯುತ್ತಿದೆ.
ಕೊರೊನಾ ಬಗ್ಗೆ ಚರ್ಚೆ:
ಮಹಾನಗರದಲ್ಲಿ ಕೊರೊನಾ ವಿಪರೀತ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಸಮುದಾಯಕ್ಕೆ ವ್ಯಾಪಿಸಿರುವ ಮಹಾಮಾರಿಯಿಂದಾಗಿ ಸಾಕಷ್ಟು ಸಾವು-ನೋವು ಸಂಭವಿಸುತ್ತಿವೆ. ರಾಜ್ಯ ಬಿಜೆಪಿ ಸರ್ಕಾರ ಹಾಗೂ ಬಿಬಿಎಂಪಿ ಇದನ್ನು ತಡೆಯುವ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿವೆ. ಆಡಳಿತವನ್ನು ಎಚ್ಚರಿಸುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಪಕ್ಷ ಮಾಡಬೇಕಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ ಮುಖಂಡರು ಚುನಾವಣೆಗೆ ಸಜ್ಜಾಗುವ ಜೊತೆಗೆ ಮಹಾಮಾರಿ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ದೇವೇಗೌಡರು ಸಭೆಯಲ್ಲಿ ಕರೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರದ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುತ್ತಿದೆ. ನಾವು ಕೂಡ ಇವರ ಜೊತೆ ಕೈಜೋಡಿಸುವುದೋ ಅಥವಾ ಪ್ರತ್ಯೇಕ ಹೋರಾಟ ನಡೆಸುವುದೋ ಎಂಬ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದು ಹೇಳಿದ್ದಾರೆ. ಕೆಲದಿನಗಳ ನಂತರ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನಕ್ಕೆ ದೇವೇಗೌಡರು ಆಗಮಿಸಿದ್ದು, ಮತ್ತೆ ಪಕ್ಷ ಸಂಘಟನೆ ಕಾರ್ಯಕ್ಕೆ ಕೈ ಹಾಕಿದ್ದಾರೆ.