ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಅಂಟಿಸಿದ ವಿಚಾರವಾಗಿ ಕಾಂಗ್ರೆಸ್ ಮುಖಂಡ ಎಸ್. ಮನೋಹರ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಜೆಡಿಎಸ್ ಮುಖಂಡರು ದೂರು ನೀಡಿದ್ದಾರೆ. ಜೆಡಿಎಸ್ ಕಚೇರಿ, ಕುಮಾರಸ್ವಾಮಿ ನಿವಾಸದ ಬಳಿ ಪೋಸ್ಟರ್ ಅಂಟಿಸಿದ್ದಾರೆ ಎಂದು ಎಸ್ ಮನೋಹರ್ ವಿರುದ್ಧ ಜೆಡಿಎಸ್ ಮುಖಂಡ ರಮೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ.
ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ರಮೇಶ್ ಗೌಡ, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಹಾಗೂ ಪಕ್ಷಗಳ ಮಧ್ಯೆ ಒಡಕು ಮೂಡಿಸಲು ಕುಮಾರಸ್ವಾಮಿ ಅವರನ್ನ ಕರೆಂಟ್ ಕಳ್ಳ ಎಂದು ಬಿಂಬಿಸಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಪೋಸ್ಟರ್ ಅಂಟಿಸಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ಕಾಂಗ್ರೆಸ್ ಮುಖಂಡ ಮನೋಹರ್ ಎಂದು ಗೊತ್ತಾಗಿದೆ.
ಮನೋಹರ್ ಒಬ್ಬ ಲೋಫರ್ ಆಗಿದ್ದಾನೆ. ಅವಹೇಳನಕಾರಿ ಪೋಸ್ಟರ್ಗಳನ್ನ ನಗರದ ಎಲ್ಲೆಡೆ ಅಂಟಿಸಿದ್ದಾನೆ. ಈ ಉದ್ದೇಶದ ಹಿಂದೆ ಜೆಡಿಎಸ್ ಕಾರ್ಯಕರ್ತರನ್ನ ಕೆರಳಿಸಿ ಅವರಿಂದ ಕಾನೂನು ಸುವ್ಯವಸ್ಥೆ ಹಾಳು ಮಾಡಿಸುವ ಕುತಂತ್ರವಿದೆ. ಪಕ್ಷದ ಕಚೇರಿ ಗೋಡೆಯ ಮೇಲೆ ಮನೋಹರ್ ಪೋಸ್ಟರ್ ಅಂಟಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಹಚರರ ಜೊತೆ ಕಾರಿನಿಂದ ಬಂದ ಮನೋಹರ್ ಅವಹೇಳನಕಾರಿ ಪೋಸ್ಟರ್ ಅಂಟಿಸಿದ್ದಾನೆ ಎಂದು ಏಕವಚನದಲ್ಲಿ ನಿಂದಿಸಿದರು.
ಅವಹೇಳನಕಾರಿ ಪೋಸ್ಟರ್ ಅಂಟಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಮಾಡಿದ್ದಾನೆ. ಜೆ ಪಿ ನಗರ, ಶೇಷಾದ್ರಿಪುರ ಹಾಗೂ ಸದಾಶಿವನಗರ ಸೇರಿದಂತೆ ಹಲವು ಕಡೆಗಳಲ್ಲಿ ಪೋಸ್ಟರ್ ಅಂಟಿಸಿದ್ದಾನೆ. ಆಡಳಿತ ಪಕ್ಷದ ಕಾರ್ಯವೈಖರಿ ಟೀಕಿಸಿದ ವಿರೋಧ ಪಕ್ಷದ ನಾಯಕರಿಗೆ ತೇಜೊವಧೆಯಾಗುವಂತಹ ಪೋಸ್ಟರ್ ಅಂಟಿಸುವುದೇ ಕಾಂಗ್ರೆಸ್ನ ಸೋಷಿಯಲ್ ಮೀಡಿಯಾ ವಿಂಗ್ನ ಕಾಯಕವಾಗಿದೆ ಎಂದರು.
ಅವಹೇಳನಕಾರಿ ಪೋಸ್ಟರ್ಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನ ಪೊಲೀಸ್ ಆಯುಕ್ತರಿಗೆ ನೀಡಲಾಗಿದೆ. ಮನೋಹರ್ ನನ್ನ ಬಂಧಿಸಿ, ಇವನ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಬೇಕು. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಇದೇ ರೀತಿ ಆಡಳಿತ ಪಕ್ಷದ ಸಚಿವರ ಅವಹೇಳನಕಾರಿ ಪೋಸ್ಟರ್ಗಳನ್ನ ಅಂಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೇ ಇದನ್ನು ನಾವು ಕೊನೆಯದಾಗಿ ಪೊಲೀಸ್ ಇಲಾಖೆಗೆ ಬಿಟ್ಟಿದ್ದೇವೆ. ಕಾನೂನು ಸುವ್ಯವಸ್ಥೆ ಹಾಳು ಮಾಡುವುದಕ್ಕೆ ಯಾರು ಈ ರೀತಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ಇವರ ಮೇಲೆ ಕ್ರಮ ಕೈಗೊಂಡರೆ ಸಂತೋಷ. ಒಂದು ವೇಳೆ ಕ್ರಮ ಕೈಗೊಳ್ಳದೇ ಹೋದರೆ ಇದಕ್ಕೆ ಪೊಲೀಸ್ ಇಲಾಖೆಯೇ ಜವಾಬ್ದಾರಿ ಎಂದು ಹೇಳಿದರು.
ಇದನ್ನೂ ಓದಿ: ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಆರೋಪ: ಬೆಸ್ಕಾಂಗೆ ದಂಡ ಕಟ್ಟಿದ ಹೆಚ್.ಡಿ.ಕುಮಾರಸ್ವಾಮಿ