ಬೆಂಗಳೂರು: ಜುಲೈ 1ರಿಂದ 17 ರವರೆಗೆ ಬೆಂಗಳೂರಿನಲ್ಲಿ 17 ದಿನಗಳ ಕಾಲ 'ಜನತಾ ಮಿತ್ರ ' ಕಾರ್ಯಕ್ರಮವನ್ನು ಜೆಡಿಎಸ್ ಹಮ್ಮಿಕೊಂಡಿದೆ. ಇದರ ಸಿದ್ಧತೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಇಂದು ಪೂರ್ವಭಾವಿ ಸಭೆ ನಡೆಸಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ನಗರದ ಎಲ್ಲಾ ವಿಧಾನಸಭೆ ಕ್ಷೇತ್ರಗಳ ಹಾಗೂ ವಾರ್ಡ್ ಅಧ್ಯಕ್ಷರುಗಳು ಭಾಗಿಯಾಗಿದ್ದರು.
ಜನತಾ ಜಲಧಾರೆಯಂತೆ ಜನತಾ ಮಿತ್ರ ಕಾರ್ಯಕ್ರಮವೂ ಯಶಸ್ವಿ ಆಗಬೇಕು. ರಾಜ್ಯದ ಕನ್ನಡಿಗರೆಲ್ಲಾ ನೆಲಮಂಗಲ ಸಮಾವೇಶದಲ್ಲಿ ಸೇರಿದಂತೆ ಬೆಂಗಳೂರು ಮಹಾನಗರದ ಜನತೆ ಜನತಾ ಮಿತ್ರ ಸಮಾವೇಶದಲ್ಲಿ ಸೇರಬೇಕು. ಹಾಗಾಗಿ ಅದಕ್ಕೆ ಅಗತ್ಯವಾದ ಎಲ್ಲ ಸಲಹೆ, ಸೂಚನೆಗಳನ್ನು ಕುಮಾರಸ್ವಾಮಿ ನೀಡಿದರು. ಜನತಾ ಮಿತ್ರ ವಾಹನವು ನಗರದ ಎಲ್ಲಾ ವಿಧಾನಸಭೆ ಕ್ಷೇತ್ರಗಳ ಪ್ರತಿಯೊಂದು ವಾರ್ಡ್ಗಳಿಗೂ ಹೋಗಬೇಕು. ಪಕ್ಷದ ಮುಖಂಡರೆಲ್ಲ ಪ್ರತ್ಯೇಕ ತಂಡಗಳಾಗಿ ಬೇರ್ಪಟ್ಟು ಸಂಚಾರ ಮಾಡಬೇಕು. ಎಲ್ಲ ವಾರ್ಡ್ ಗಳಲ್ಲಿಯೂ ಸಭೆಗಳನ್ನು ನಡೆಸಬೇಕು. ಅದಕ್ಕೆ ಅಗತ್ಯವಾದ ಎಲ್ಲ ಸೂಚನೆಗಳನ್ನು ಅವರು ಕೊಟ್ಟರು.
ಹೆಚ್ಡಿಕೆಯಿಂದ ಕಾರ್ಯಕರ್ತರಿಗೆ ಸೂಚನೆ: ಜನತಾ ಮಿತ್ರ ವಾಹನವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಜನರು ತಮ್ಮ ನಿರೀಕ್ಷೆಯ ಸರ್ಕಾರ ಹೇಗಿರಬೇಕು ಎಂಬ ಬಗ್ಗೆ ಸಲಹೆ, ಅಭಿಪ್ರಾಯಗಳನ್ನು ಕೊಡಬಹುದು. ಜನತಾ ಮಿತ್ರ ಕಾರ್ಯಕ್ರಮವನ್ನು ನಗರದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಮನೆ ಮನೆಗೂ ತಲುಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂಬ ಸ್ಪಷ್ಟ ಸೂಚನೆಯನ್ನು ಅವರು ನೀಡಿದರು.
ಎಲ್ಇಡಿ ವಾಹನಗಳು ಸಿದ್ಧ: ಈಗಾಗಲೇ 15 ಜನತಾ ಮಿತ್ರ ಹೆಸರಿನ ಎಲ್ಇಡಿ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಒಂದು ವಾಹನ ತಲಾ ಎರಡು ಕ್ಷೇತ್ರಗಳಿಗೆ ತೆರಳಿದೆ. ಅಷ್ಟೂ ವಾಹನಗಳಿಗೆ ಶಾಸಕರು ಅಥವಾ ಹಿರಿಯ ಮುಖಂಡರ ನೇತೃತ್ವದಲ್ಲಿ ಉಸ್ತುವಾರಿ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ತಮ್ಮನ್ನು ಒಳಗೊಂಡಂತೆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಎಲ್ಲ ಪ್ರಮುಖರು ತಮ್ಮ ನೇತೃತ್ವದ ತಂಡಗಳ ಮೂಲಕ ಕ್ಷೇತ್ರಗಳಿಗೂ ಭೇಟಿ ನೀಡಲಿದ್ದೇವೆ ಎಂದು ಹೆಚ್ಡಿಕೆ ತಿಳಿಸಿದರು.
ಇದನ್ನೂ ಓದಿ: 'ಜನತಾ ಮಿತ್ರ' ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿದ ಹೆಚ್ಡಿಕೆ
ಈ ವಾಹನಗಳು ಬರುವ ಮುನ್ನ ಆಯಾ ಕ್ಷೇತ್ರಗಳಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹೆಚ್.ಡಿ. ದೇವೇಗೌಡರು ಸಿಎಂ, ಪ್ರಧಾನಮಂತ್ರಿಯಾಗಿ ಹಾಗೂ ನಾನು ಮುಖ್ಯಮಂತ್ರಿಯಾಗಿ ಬೆಂಗಳೂರು ನಗರಕ್ಕೆ ನೀಡಿದ ಕೊಡುಗೆಗಳ ಮಾಹಿತಿಯನ್ನು ಮನೆಮನೆಗೂ ಮುಟ್ಟಿಸಬೇಕು ಎಂದು ಕುಮಾರಸ್ವಾಮಿ ಅವರು ನಿರ್ದೇಶನ ನೀಡಿದರು.
ಜನತಾ ಮಿತ್ರ ಉದ್ದೇಶವೇನು?: 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ನಾವು ನಗರದ ಜನತೆಗೆ ಮನದಟ್ಟು ಮಾಡಿಕೊಡಬೇಕು. ಅಲ್ಲದೆ, ಪ್ರಾದೇಶಿಕ ಆಸ್ಮಿತೆಯ ಪಕ್ಷವಾದ ಜಾತ್ಯತೀತ ಜನತಾದಳವು ಈ ಯಾತ್ರೆಯ ಮೂಲಕ ಜನರಿಂದ ಭವಿಷ್ಯದ ಸರ್ಕಾರ ಹೇಗೆ ಕೆಲಸ ಮಾಡಬೇಕು? ಜನರ ನಿರೀಕ್ಷೆಗಳೇನು? ಇತ್ಯಾದಿ ಅಂಶಗಳ ಬಗ್ಗೆ ನೇರವಾಗಿ ಜನತೆಯಿಂದಲೇ ಅಭಿಪ್ರಾಯ ಸಂಗ್ರಹ ಮಾಡಲಿದೆ ಎಂದು ಹೆಚ್ಡಿಕೆ ಹೇಳಿದರು.