ಬೆಂಗಳೂರು: ಯಲಹಂಕ ವಿಧಾನಸಭೆ ಕ್ಷೇತ್ರದಲ್ಲಿ ಎಲೆಕ್ಷನ್ ಪ್ರಚಾರ ಜೋರಾಗಿದೆ. ಮತ ಸಮರದಲ್ಲಿ ಗೆಲ್ಲಲೇಬೇಕೆಂಬ ಹುಮ್ಮಸ್ಸಿನಲ್ಲಿರುವ ಇಲ್ಲಿನ ಅಭ್ಯರ್ಥಿಯೊಬ್ಬರ 17 ನಿಮಿಷದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಹಾಗೂ ಜೆಡಿಎಸ್ ವಕ್ತಾರ ಚರಣ್ ಗೌಡ ನಡೆಸಿದ್ದಾರೆ ಎನ್ನಲಾದ ಚರ್ಚೆಯ ವಿಡಿಯೋ ತುಣುಕು ಹೊರಬಂದಿದೆ. ಮುನೇಗೌಡ ತಾವೇ ತಮ್ಮ ಹುಡುಗರಿಂದ ಕಿಡ್ನಾಪ್ ಆಗಿ ಅದನ್ನು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ನಡೆಸಿದ್ದರು ಎಂದು ಸುಳ್ಳು ಆರೋಪ ಹೊರಿಸಲು ತಯಾರಿ ನಡೆಸಿದ್ದಾಗಿ ಬಿಜೆಪಿ ಗಂಭೀರ ಆರೋಪ ಮಾಡಿದೆ.
ವಿಡಿಯೋದಲ್ಲೇನಿದೆ?: ಮುನೇಗೌಡ ಹಾಗೂ ಚರಣ್ ಗೌಡ ಅನಾಮಧೇಯ ವ್ಯಕ್ತಿಯೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾದ ವಿಡಿಯೋದಲ್ಲಿ ಮೇ 5 ಅಥವಾ 6ರಂದು ಫೇಕ್ ಕಿಡ್ನ್ಯಾಪ್ ತಂತ್ರದ ಚರ್ಚೆ ನಡೆಸಲಾಗಿದೆ. ಅಪಹರಣದ ನಂತರ ಹೊಸೂರು ರಸ್ತೆಯ ಫಾರ್ಮ್ ಹೌಸ್ನಲ್ಲಿ ಎರಡ್ಮೂರು ದಿನ ಉಳಿದುಕೊಳ್ಳುವ ಯೋಜನೆಯ ಬಗ್ಗೆ ಮಾತುಕತೆಯಾಗಿದೆ. ಕಿಡ್ನಾಪ್ ಆದ ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುವುದೂ ಸೇರಿದಂತೆ ಹಲವು ತಂತ್ರಗಳ ಬಗ್ಗೆ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೇ 7ರಂದು ಜೆಡಿಎಸ್ ಸಮಾವೇಶಕ್ಕೆ ಗೈರಾಗುವ ಮೂಲಕ ಮತದಾರರ ಅನುಕಂಪ ಗಿಟ್ಟಿಸಿಕೊಳ್ಳುವ ಪ್ಲ್ಯಾನ್ ಮಾಡಲಾಗಿತ್ತು. ಇದರ ಜೊತೆಗೆ ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ಮುನೇಗೌಡ ಪತ್ನಿ ಹಾಗೂ ಭಾವ, ಮೈದುನನ್ನು ಪ್ರಚಾರಕ್ಕೆ ಕಳುಹಿಸಿ ತಮ್ಮವರಿಂದಲೇ ಅವರಿಗೆ ಹಲ್ಲೆ ಮಾಡಿಸಿ ಅದನ್ನು ಬಿಜೆಪಿಗರ ತಲೆಗೆ ಕಟ್ಟುವ ಬಗ್ಗೆ ಮಾತುಕತೆ ನಡೆಸಿರುವುದು ವಿಡಿಯೋದಲ್ಲಿದೆ ಎಂದು ಆರೋಪಿಸಿರುವ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಹನುಮನ ಭಕ್ತರು ಈ 40% ಕಮಿಷನ್ ಸರ್ಕಾರದ ವಿರುದ್ಧ ಗದಾಪ್ರಹಾರ ನಡೆಸಲಿದ್ದಾರೆ: ಎಐಸಿಸಿ ವಕ್ತಾರ ಗೌರವ್ ವಲ್ಲಭ್
"ಚುನಾವಣೆಯನ್ನು ನೇರವಾಗಿ ಎದುರಿಸುವುದು ಬಿಟ್ಟು ಹೀಗೆ ಅಡ್ಡದಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಹೆಂಡತಿಯನ್ನು ಮುಂದಿಟ್ಟುಕೊಂಡು ಇಂಥ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ರಾಜನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ" ಎಂದು ವಿಶ್ವನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬಜರಂಗದಳ ಬ್ಯಾನ್ ಆಗಲ್ಲ- ಸಿಎಂ; ಇಂದಿರಾ ಕಾಲದಲ್ಲೇ ಬ್ಯಾನ್ ಆಗಿಲ್ಲ ಅಂದ್ರು ಸಿ.ಸಿ.ಪಾಟೀಲ್