ಬೆಂಗಳೂರು: ಜಯದೇವ ಆಸ್ಪತ್ರೆ ವೈದ್ಯರನ್ನು ಕೊರೊನಾ ವೈರಸ್ ಕಂಗೆಡಿಸಿದ್ದು, ಈಗಾಗಲೇ ನಾಲ್ಕು ದಿನಗಳ ಕಾಲ ಒಪಿಡಿ ಬಂದ್ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ನಾಲ್ವರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜೂನ್ 24-27 ರವರೆಗೆ ಹೊರ ರೋಗಿಗಳ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿತ್ತು. ಈಗ ಮುಂದುವರೆದ ಭಾಗವಾಗಿ, ಜುಲೈ 4 ರವರೆಗೆ ಸೇವೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಮತ್ತೆ ಪಾಸಿಟಿವ್ ಕೇಸ್ ದೃಢವಾಗುತ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದರೆ ಮಾತ್ರ ಆಸ್ಪತ್ರೆಗೆ ಬರುವಂತೆ ರೋಗಿಗಳಿಗೆ ಮನವಿ ಮಾಡಲಾಗಿದೆ.
ಲಾಕ್ಡೌನ್ ಸಂದರ್ಭದಲ್ಲೂ ಒಪಿಡಿ ಬಂದ್ ಮಾಡಿರಲಿಲ್ಲ, ಇದೀಗ ವೈದ್ಯರು ಹಾಗೂ ಸಿಬ್ಬಂದಿಗೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಒಪಿಡಿ ಸೇವೆ ಸ್ಥಗಿತಗೊಳಿಸಲಾಗಿದೆ.
ರೋಗಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಟೆಲಿಮೆಡಿಸನ್ ಸೇವೆ ಜಾರಿಯಲ್ಲಿರಲಿದೆ. ಟೆಲಿ ಸಂಪರ್ಕಕ್ಕಾಗಿ 080-22977400 (267,433,456 ) ಸಂಖ್ಯೆಗೆ ಕರೆ ಮಾಡಬಹುದು.