ಬೆಂಗಳೂರು: ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಿ ದೊರೆಯಬೇಕು ಎಂಬ ಉದ್ದೇಶದಿಂದ ಎಲ್ಲೆಡೆ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನ ಸ್ಥಾಪಿಸಲಾಗಿದೆ. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಶುರುಮಾಡಿರುವ ಜನೌಷಧಿ ಕೇಂದ್ರಗಳು ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಶೇ 70 ರಷ್ಟು ವೃದ್ಧಿಯಾಗಿದೆ.
ರಾಜ್ಯದಲ್ಲಿ ಸದ್ಯ 705 ಕೇಂದ್ರಗಳಿದ್ದು ಪ್ರತಿ ವರ್ಷ ಹೊಸ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇನ್ನು ಜನೌಷಧಿಯಲ್ಲಿ 825 ಬಗೆಯ ಔಷಧ, 122 ಬಗೆಯ ಸರ್ಜಿಕಲ್ ಸಾಧನೆಗಳು ಲಭ್ಯವಿದೆ.
ಆದರೆ ಜನೌಷಧ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಬರುವ ದೂರು ಅಂದ್ರೆ, ಔಷಧಿ ಪೂರೈಕೆ ಸಂಪರ್ಕವಿಲ್ಲ, ವೈದ್ಯರು ಬರೆದು ಕೊಡುವ ಬಹಳಷ್ಟು ಔಷಧಗಳು ಲಭ್ಯವಿರೋದಿಲ್ಲ ಅಂತ ಜನಸಾಮಾನ್ಯರು ಹೇಳೋದು ಹೆಚ್ಚಾಗಿದೆ.
ಈ ಬಗ್ಗೆ ಮಾತನಾಡಿರುವ ಬೃಹತ್ ಬೆಂಗಳೂರು ಕೆಮಿಸ್ಟ್ & ಡ್ರಗ್ಸ್ ಅಸೋಸಿಯೇಷನ್ನ ಅಧ್ಯಕ್ಷ ಎಂ.ಕೆ ಮಾಯಣ್ಣ, ಹಲವೆಡೆ ಜನೌಷಧಿಯಲ್ಲಿ ಔಷಧಿಗಳು ಪೂರೈಕೆಯಿಲ್ಲ ಎಂಬ ತಪ್ಪು ಮಾಹಿತಿ ಕೊಟ್ಟು, ಮಾರುಕಟ್ಟೆಯಲ್ಲಿ ಸಿಗುವ ಕಳಪೆ ಗುಣಮಟ್ಟದ ಮೆಡಿಸಿನ್ಗಳನ್ನು ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ. ಲಾಭದ ಆಸೆಗೆ ಸರ್ಕಾರ ಶುರು ಮಾಡಿರುವ ಜನೌಷಧಿ ಕೇಂದ್ರವನ್ನ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಓದಿ: ಬಡವರ ಪಾಲಿನ ರಾಮಬಾಣ ಜನೌಷಧ ಕೇಂದ್ರಗಳು: ಹೀಗಿದೆ ರಿಯಾಲಿಟಿ!
ಸರ್ಕಾರವು ಜನೌಷಧ ಕೇಂದ್ರದ ಔಷಧಿಯನ್ನ ನಮಗೆ ಪೂರೈಕೆ ಮಾಡಿದರೆ ನಾವೇ ಒಂದು ಪ್ರತ್ಯೇಕ ಕೌಂಟರ್ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಿದ್ದೇವೆ. ಈ ಮೂಲಕ ಸರ್ಕಾರದ ಉದ್ದೇಶದಂತೆ ಜನಸಾಮಾನ್ಯರಿಗೆ ಗುಣಮಟ್ಟದ ಔಷಧ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.