ಬೆಂಗಳೂರು: ಲಾಕ್ಡೌನ್ ನಡುವೆಯು ಐಟಿಸಿ ಲಿಮಿಟೆಡ್ ಸಂಸ್ಥೆಯು ಬಿಬಿಎಂಪಿಗೆ 10.18 ಕೋಟಿ ಆಸ್ತಿ ತೆರಿಗೆ ಪಾವತಿಸಿದೆ.
ನಗರದ ಮಾರುತಿ ಸೇವಾನಗರ ವಾರ್ಡ್-59 ವ್ಯಾಪ್ತಿಯಲ್ಲಿನ ಐಟಿಸಿ ಲಿಮಿಟೆಡ್ ಸಂಸ್ಥೆಯು 2020-21ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿ ಮಾಡಿದೆ. ಬಿಬಿಎಂಪಿ ಆಯುಕ್ತರು ಹಾಗೂ ಪೂರ್ವ ವಲಯ ಜಂಟಿ ಆಯುಕ್ತ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಸಿರುವ ಚೆಕ್ಅನ್ನು ಸಂಸ್ಥೆಯ ಅಧಿಕಾರಿಗಳಿಂದ ಪಡೆದುಕೊಂಡರು.
ಆಸ್ತಿ ತೆರಿಗೆ ಚೆಕ್ಅನ್ನು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ಸಹಾಯ ಕಂದಾಯ ಅಧಿಕಾರಿ ವೀಣಾ ಸ್ವೀಕರಿಸಿದ್ದಾರೆ. ಈ ಕಂಪನಿಯ ಬಾಣಸವಾಡಿ ಕಟ್ಟಡದ 10.2 ಕೋಟಿ ಹಾಗೂ ಜೀವನಹಳ್ಳಿ ಕಟ್ಟಡದ 16.13 ಲಕ್ಷ ರೂಪಾಯಿ ಸೇರಿ ಒಟ್ಟು 10.18 ಕೋಟಿ ರೂಪಾಯಿ ಆಸ್ತಿ ತೆರಿಗೆ ಪಾವತಿಸಲಾಗಿದೆ.
ಕೋವಿಡ್-19 ಕ್ಲಿಷ್ಟಕರ ಸಮಯದಲ್ಲಿ ಐಟಿಸಿ ಲಿಮಿಟೆಡ್ ಸಂಸ್ಥೆಯವರು ಸ್ವಯಂ ಪ್ರೇರಿತರಾಗಿ ತೆರಿಗೆ ಹಣವನ್ನು ಪಾವತಿದ್ದು, ಬಿಬಿಎಂಪಿಗೆ ಆರ್ಥಿಕ ಬಲ ತುಂಬಿದೆ. ಇದೇ ರೀತಿ ಬೇರೆ ಸಂಸ್ಥೆಗಳು ಮತ್ತು ಸಾರ್ವಜನಿಕರು ತೆರಿಗೆ ಪಾವತಿಸುವಂತೆ ಬಿಬಿಎಂಪಿ ಆಯುಕ್ತರು ಮನವಿ ಮಾಡಿದ್ದಾರೆ.