ಬೆಂಗಳೂರು : ಆದಾಯ ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಬೆಂಗಳೂರು, ಹುಬ್ಬಳ್ಳಿ, ಮುಂಬೈ ಸೇರಿ ಹಲವು ಕಡೆಗಳಲ್ಲಿ ಆಸ್ಪತ್ರೆ, ಲ್ಯಾಬ್ ಮತ್ತು ಡಯಾಗ್ನಸ್ಟಿಕ್ ಸೆಂಟರ್‌ಗಳ ಮೇಲೆ ಆದಾಯ ತೆರಿಗೆ(ಐಟಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿ ಹಲವು ಕಡೆ ಮುಂಬೈನಿಂದ ಆಗಮಿಸಿದ ಐಟಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದೆ. ಏಳು ಇನೋವಾ ಕಾರುಗಳಲ್ಲಿ ಬಂದ ಐಟಿ ಅಧಿಕಾರಿಗಳು, ಮುಂಜಾನೆ 4 ಗಂಟೆಗೆ ಸಿಆರ್‌ಪಿಎಫ್ ಭದ್ರತೆ ನಡುವೆ ನಗರದ ಮಲ್ಲೇಶ್ವರದಲ್ಲಿರುವ ಲ್ಯಾಬ್ ಮೇಲೆ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಲ್ಯಾಬ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ರೋಗಿಗಳ ವಿವರ ನೀಡದೇ ಸುಳ್ಳು ಮಾಹಿತಿ ನೀಡಿ ಸರ್ಕಾರದಿಂದ ಹೆಚ್ಚಿನ ಹಣವನ್ನು ಪಡೆದುಕೊಂಡು ಆದಾಯ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಮಲ್ಲೇಶ್ವರದ 15ನೇ ಕ್ರಾಸ್‌ನಲ್ಲಿರುವ ಲ್ಯಾಬ್ ಮತ್ತು ಡಯಾಗ್ನಸ್ಟಿಕ್ ಸೆಂಟರ್ ಮೇಲೆಯೂ ದಾಳಿ ನಡೆಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಎಷ್ಟು ಜನ ದಾಖಲಾಗಿದ್ದರು. ಅವರಿಗೆ ಇಲ್ಲಿ ಎಷ್ಟು ದಿನ ಚಿಕಿತ್ಸೆ ನೀಡಲಾಗಿತ್ತು? ಒಬ್ಬ ರೋಗಿಗೆ ನಿಗದಿಪಡಿಸಿದ ಚಿಕಿತ್ಸಾ ದರ ಎಷ್ಟು? ಇತ್ಯಾದಿ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಾಹಿತಿಯನ್ನು ಪಡೆದಿದ್ದಾರೆ.
ಇದೇ ರೀತಿ ಹುಬ್ಬಳ್ಳಿ, ಮುಂಬೈಯಲ್ಲೂ ಐಟಿ ಅಧಿಕಾರಿಗಳು ಕೆಲವು ಖಾಸಗಿ ಲ್ಯಾಬ್‌ಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ತೆರಿಗೆ ವಂಚನೆ ಆರೋಪ: ಆಭರಣದಂಗಡಿ ಮೇಲೆ ಐಟಿ ದಾಳಿ