ಬೆಂಗಳೂರು : ಹಣ ಕೊಟ್ಟು ಉನ್ನತ ಹುದ್ದೆಗಳಿಗೆ ಬಂದ ಅಧಿಕಾರಿಗಳಿಂದ ಸಾರ್ವಜನಿಕ ಹಿತಾಸಕ್ತಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಹಣ ಕೊಟ್ಟು ಉನ್ನತ ಹುದ್ದೆಗಳಿಗೆ ಬರುವ ಪದ್ದತಿಯನ್ನು ಕೊನೆಗೊಳಿಸಲು ಸರ್ಕಾರದ ವಿರುದ್ಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದೆ.
ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ಮತ್ತು ದಕ್ಷಿಣ ತಾಲೂಕು ತಹಶೀಲ್ದಾರ್ ಶಿವಪ್ಪ ಲಮಾಣಿ ನ್ಯಾಯಾಲಯದ ತಡೆಯಾಜ್ಞೆ ಉಲ್ಲಂಘಿಸಿ ಕಟ್ಟಡ ತೆರವು ಮಾಡಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಪೀಠ ಎಸಿ ಆದೇಶ ರದ್ದುಪಡಿಸುವ ವೇಳೆ ಈ ಮನವಿ ಮಾಡಿದೆ.
ಪ್ರಕರಣದಲ್ಲಿ ಅಧಿಕಾರಿಗಳಾದ ಎಂ.ಜಿ. ಶಿವಣ್ಣ ಹಾಗೂ ಶಿವಪ್ಪ ಲಮಾಣಿ ನೈಸರ್ಗಿಕ ನ್ಯಾಯ ಪಾಲಿಸಿಲ್ಲ. ಮೂಲಭೂತ ಹಕ್ಕುಗಳನ್ನು ಕೂಡ ಪರಿಗಣಿಸಿಲ್ಲ. ಅಧಿಕಾರಿಗಳ ಅರ್ಹತೆ ಮತ್ತು ಸಾರ್ವಜನಿಕ ಹಿತಾಸಕ್ತಿ ಪರಿಗಣಿಸದೆ ಹಣ ಪಡೆದು ಉನ್ನತ ಹುದ್ದೆಗಳಿಗೆ ನಿಯೋಜಿಸಿದಾಗ ಅವರು ತಮ್ಮ ಅಧಿಕಾರ ವ್ಯಾಪ್ತಿ ಮತ್ತು ಪರಿಣಾಮಗಳ ಅರಿವಿಲ್ಲದೆ ಇಂತಹ ಆದೇಶಗಳನ್ನು ಮಾಡುತ್ತಾರೆ. ತಮಗೆ ಸರ್ಕಾರದ ರಕ್ಷಣೆ ಇದೆ ಎಂದುಕೊಂಡು ಕಾನೂನಿನ ಭಯವಿಲ್ಲದೆ ಅಧಿಕಾರ ಚಲಾಯಿಸುತ್ತಾರೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹಾಗೆಯೇ ಪ್ರಕರಣದ ನಾಲ್ವರು ಮೇಲ್ಮನವಿದಾರರಿಗೆ ಅಧಿಕಾರಿಗಳು ತಲಾ ಹತ್ತು ಸಾವಿರ ರೂಪಾಯಿ ದಂಡವನ್ನು ಪರಿಹಾರ ರೂಪದಲ್ಲಿ ಪಾವತಿಸಬೇಕು. ಇಬ್ಬರೂ ಅಧಿಕಾರಿಗಳ ವಿರುದ್ಧ ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇಲಾಖಾ ವಿಚಾರಣೆ ನಡೆಸಬೇಕು. ಅಗತ್ಯವೆನ್ನಿಸಿದರೆ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಪೀಠ ಆದೇಶಿಸಿದೆ.
ಇದೇ ವೇಳೆ ಆಡಳಿತದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಹಾಗೂ ಹಣ ಕೊಟ್ಟು ಅಧಿಕಾರಿಗಳು ಉನ್ನತ ಹುದ್ದೆಗಳನ್ನು ಪಡೆದುಕೊಳ್ಳುವುದನ್ನು ಕೊನೆಗೊಳಿಸಲು ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡು ವಿಚಾರಣೆ ನಡೆಸುವ ಕುರಿತು ಸಿಜೆ ಯೋಚಿಸಬೇಕು ಎಂದು ಪೀಠ ಮನವಿ ಮಾಡಿದೆ.
ಪ್ರಕರಣದ ಹಿನ್ನೆಲೆ - ಪಿಟಿಸಿಎಲ್ ಕಾಯ್ದೆ ಅಡಿ ಎಂ. ಮುನಿರಾಜು ಎಂಬುವರು ಸಲ್ಲಿಸಿದ್ದ ಅರ್ಜಿ ಆಧರಿಸಿ 2001 ಮತ್ತು 2002ರಲ್ಲಿ ನಡೆದಿದ್ದ ಆಸ್ತಿ ಪರಭಾರೆಯನ್ನು ರದ್ದುಗೊಳಿಸಿ 2020ರ ಫೆ.18ರಂದು ಎಸಿ ಆದೇಶಿಸಿದ್ದರು. ಹಾಗೆಯೇ ಮುನಿರಾಜು ಕೋರಿಕೆಯಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಕೂಡ ಭೂಮಿಯನ್ನು ಮೂಲ ಮಂಜೂರುದಾರರಿಗೆ ವಾಪಸ್ಸು ನೀಡಲು ಆದೇಶಿಸಿತ್ತು. ಈ ಆದೇಶಗಳನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ವೇಳೆ ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಿದ್ದು ಬೆಳಕಿಗೆ ಬಂದಿತ್ತು.