ಬೆಂಗಳೂರು: ಮೆಜೆಸ್ಟಿಕ್, ರೈಲ್ವೆ ನಿಲ್ದಾಣ ಹಾಗೂ ಇತರ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿನ ಸಬ್ ವೇಗಳಲ್ಲಿ ಇಡಲಾಗಿದ್ದ ಅಕ್ರಮ ಅಂಗಡಿಗಳನ್ನ ತೆರವುಗೊಳಿಸಲಾಗಿದೆ ಎಂದು ಹೈಕೋರ್ಟ್ಗೆ ಬಿಬಿಎಂಪಿ ಮಾಹಿತಿ ನೀಡಿದೆ.
ಸಬ್ ವೇಗಳಲ್ಲಿನ ಅಕ್ರಮ ಅಂಗಡಿಗಳನ್ನ ತೆರವುಗೊಳಿಸುವಂತೆ ಕೋರಿ ಆರ್ಟಿಐ ಕಾರ್ಯಕರ್ತ ರವಿ ಕುಮಾರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ಬಿಬಿಎಂಪಿ ಮಾಹಿತಿಯನ್ನ ನ್ಯಾಯಾಲಯಕ್ಕೆ ನೀಡಿದೆ.
ಸಬ್ ವೇಗಳಲ್ಲಿನ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ಅಡಚಣೆ ಉಂಟಾಗುತ್ತಿದೆ. ಎರಡು ಬದಿಯ ಅಂಗಡಿ ಮುಂದೆ ಜನ ನಿಲ್ಲುವುದರಿಂದ ಪ್ರಯಾಣಿಕರಿಗೆ ಓಡಾಡಲು ಸಬ್ ವೇನಲ್ಲಿ ಜಾಗ ಇಲ್ಲದಂತಾಗಿದೆ. ಹಾಗಾಗಿ ಅಕ್ರಮ ಅಂಗಡಿಗಳನ್ನ ತೆರವು ಮಾಡಲು ಬಿಬಿಎಂಪಿಗೆ ಆದೇಶಿಸಲು ಕೋರಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.
ಬಿಬಿಎಂಪಿ ಅಂಗಡಿಗಳ ತೆರವಿಗೆ ಕ್ರಮ ಕೈಗೊಂಡಿರುವ ಕುರಿತು ನ್ಯಾಯಲಯದ ಗಮನಕ್ಕೆ ತಂದಾಗ, ಇದೇ ಸ್ಥಿತಿಯನ್ನು ಕಾಪಾಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿ ಅರ್ಜಿಯನ್ನ ಇತ್ಯರ್ಥಪಡಿಸಿದೆ.