ಬೆಂಗಳೂರು: ಹಿಂದಿನ ಸರ್ಕಾರದ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ವಿಧಾನಸಭೆಯಲ್ಲಿ ಆಗ್ರಹಿಸಿದರು. ಇಂದು ಬಜೆಟ್ ಮೇಲಿನ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿತ್ತೀಯ ಶಿಸ್ತನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಾಲನೆ ಮಾಡಿಲ್ಲ. ಹೀಗಾಗಿ ಆರ್ಥಿಕ ಅಶಿಸ್ತು ಎದುರಾಗಿದೆ. ಆರ್ಥಿಕ ಸ್ಥಿತಿ ಬಗ್ಗೆ ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಹಿಂದಿನ ಬಜೆಟ್‍ನಲ್ಲಿ ಶಿಸ್ತು ತರಲು ಬಿಜೆಪಿಗೆ ಸಾಧ್ಯವಾಗಲಿಲ್ಲ. 14ನೇ ಹಣಕಾಸು ಆಯೋಗದ ಶಿಫಾರಸು ಚೆನ್ನಾಗಿತ್ತು. 15ನೇ ಹಣಕಾಸು ಆಯೋಗದ ಶಿಫಾರಿಸ್ಸಿನಿಂದ ನಮ್ಮ ರಾಜ್ಯಕ್ಕೆ ಬರಬೇಕಿದ್ದ ಹಣ ಕಡಿಮೆಯಾಗಿದೆ. ತೆರಿಗೆ ನೀಡುವಲ್ಲಿಯೂ ಅನ್ಯಾಯ ಮಾಡಿದೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನ್ಯಾಯ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
16ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಸರ್ವಪಕ್ಷಗಳ ನಿಯೋಗ ಮತ್ತು ಸಂಸದರನ್ನು ಕೇಂದ್ರ ಸರ್ಕಾರದ ಬಳಿಗೆ ಕರೆದೊಯ್ದು ರಾಜ್ಯಕ್ಕೆ ಬರಬೇಕಾದ ಹಣವನ್ನು ಪಡೆಯಲು ಪ್ರಯತ್ನಿಸಬೇಕು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಣದ ಬಗ್ಗೆ ಬಿಜೆಪಿಯವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ಸದನದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಚರ್ಚಿಸಬೇಕಿತ್ತು. ವಿರೋಧ ಪಕ್ಷಕ್ಕೂ ಜವಾಬ್ದಾರಿ ಇದೆ. ಯಾವುದೋ ಒಂದು ಕಾರಣಕ್ಕಾಗಿ ಅಗೌರವದಿಂದ ಬಿಜೆಪಿಯವರು ನಡೆದುಕೊಂಡಿರುವುದು ಸರಿಯಲ್ಲ. ಇದು ಅವರ ಬೇಜವಾಬ್ದಾರಿತನವನ್ನು ಎತ್ತಿ ತೋರುತ್ತದೆ ಎಂದು ಟೀಕಿಸಿದರು.
ಕೇಂದ್ರದಿಂದ ಮಲತಾಯಿ ಧೋರಣೆ: ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ಸದಸ್ಯ ಕೆ ಎಂ ಶಿವಲಿಂಗೇಗೌಡ, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲಿನ ಹಣವನ್ನು ಸಮರ್ಪಕವಾಗಿ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ಅನ್ಯಾಯದ ವಿರುದ್ಧ ಸಾರ್ವಜನಿಕ ಚರ್ಚೆಗೆ ತಾವು ಸಿದ್ಧ ಎಂದು ಸವಾಲು ಹಾಕಿದ ಅವರು, ಕೇಂದ್ರಕ್ಕೆ ಅತಿಹೆಚ್ಚು ತೆರಿಗೆ ನೀಡುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೆ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲಿನ ಹಣ ಬಿಡುಗಡೆ ಮಾಡುವಲ್ಲಿ ಕೇಂದ್ರವು ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಕಿಡಿಕಾರಿದರು.
15ನೇ ಹಣಕಾಸು ಆಯೋಗದ ಪ್ರಕಾರ ಕೇವಲ 37 ಸಾವಿರ ಕೋಟಿ ಮಾತ್ರ ನೀಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಾಯೋಜಿತ ಯೋಜನೆಗಳಿಗೆ 13 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ನಮ್ಮ ಪಾಲಿನ ಹಣ ನೀಡುವಲ್ಲಿ ತಾರತಮ್ಯ ಮಾಡುತ್ತಲೇ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 3,27,000 ಕೋಟಿ ಬಜೆಟ್ ಮಂಡಿಸಿದ್ದು, ಜಿಎಸ್‍ಟಿ ಸೇರಿದಂತೆ ಅಬಕಾರಿ ಮತ್ತಿತರ ಬಾಬ್ತುಗಳಿಂದ 1,75,000 ಕೋಟಿ ಆದಾಯ ಬರುವ ನಿರೀಕ್ಷೆ ಇದೆ. 85 ಸಾವಿರ ಕೋಟಿ ರೂ. ಸಾಲ ಮಾಡುವ ತೀರ್ಮಾನವನ್ನು ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.
ಸರ್ಕಾರ ಘೋಷಣೆ ಮಾಡಿರುವ ಎಲ್ಲಾ ಐದು ಗ್ಯಾರಂಟಿಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಬಜೆಟ್‍ನಲ್ಲಿ ಹಣ ಮೀಸಲಿಡಲಾಗಿದೆ. ಇದನ್ನು ಸಹಿಸದ ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಸರ್ಕಾರ ಈ ಯೋಜನೆಗಳ ಲಾಭವನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಖಂಡಿತ ಮಾಡಲಿದೆ. ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಂಗ್ಲಮಾಧ್ಯಮ ಬೋಧಿಸುವ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳನ್ನು ತೆರೆಯಬೇಕು. ಪ್ರಗತಿಯಲ್ಲಿರುವ ಎಲ್ಲ ಬೃಹತ್ ನೀರಾವರಿ ಯೋಜನೆಗಳನ್ನು ಮತ್ತು ಏತನೀರಾವರಿ ಯೋಜನೆಗಳು ಪೂರ್ಣಗೊಳ್ಳಲು ಅಗತ್ಯವಿರುವ ಹಣವನ್ನು ಕೇಂದ್ರ ಸರ್ಕಾರ ನೀಡಬೇಕೆಂದು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ಬಿಜೆಪಿ ಶಾಸಕರ ಅಮಾನತು ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಂದ ಕಲಾಪ ಬಹಿಷ್ಕಾರ