ಬೆಂಗಳೂರು: ಕಾವೇರಿ ನದಿಯಲ್ಲಿ ಎಷ್ಟು ನೀರು ಇದೆ, ಎಷ್ಟು ನೀರು ಈ ಬಾರಿ ಬಂದಿದೆ, ನಮ್ಮ ಜಲಾಶಯದಲ್ಲಿ ಎಷ್ಟು ನೀರು ತುಂಬಿದೆ, ನಮಗೆ ಕುಡಿಯಲು ಎಷ್ಟು ನೀರು ಬೇಕು ಎಂಬುದರ ಶ್ವೇತ ಪತ್ರವನ್ನು ಹೊರಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು, ಮಂಡ್ಯ, ಬೆಂಗಳೂರು ಭಾಗದಲ್ಲಿ ಕುಡಿಯುವ ನೀರಿಗೆ ಕಾವೇರಿ ನದಿಯ ನೀರನ್ನೇ ಅವಲಂಬಿಸಿದ್ದಾರೆ ಈ ವರ್ಷ ನಮ್ಮ ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ, ಹೀಗಾಗಿ ಕೆಆರ್ಎಸ್ ಭರ್ತಿಯಾಗಿಲ್ಲ. ಆದರೂ ಕೂಡ ರಾಜ್ಯ ಸರ್ಕಾರ ತಮಿಳುನಾಡಿನ ಕುರುವೈ ಬೆಳಗ್ಗೆ ನೀರು ಬಿಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಳೆದ ಬಾರಿ ತಮಿಳುನಾಡಿಗೆ ಹೆಚ್ಚುವರಿ ನೀರನ್ನು ಬಿಡಲಾಗಿತ್ತು. ತಮಿಳುನಾಡಿನ ಜಲಾಶಯದಲ್ಲಿ ನೀರು ಇದೆ, ತಮಿಳುನಾಡಿಗೆ ಕುಡಿಯಲು ನೀರು ಬಿಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರಿಗೆ ನೀರು ಕೊಡದಿರಲು ನಾವೇನು ಭಾರತ - ಪಾಕಿಸ್ತಾನದಂತೆ ವೈರಿಗಳಲ್ಲ. ನೆರೆಹೊರೆ ರಾಜ್ಯಗಳು ನಮ್ಮ ಅಣ್ಣ ತಮ್ಮಂದಿರ ರೀತಿ. ಆದರೆ, ಬೆಂಗಳೂರಿನಲ್ಲಿ ಕುಡಿಯುವ ನೀರು ಸರಬರಾಜಿಗೂ ನೀರು ಕೊರತೆಯಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಐಎನ್‌ಡಿಐಎ ನಾಯಕರನ್ನು ತೃಪ್ತಿಪಡಿಸಲು ಕರ್ನಾಟಕ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರನ್ನು ಹರಿಸಲಾಗುತ್ತಿದೆ ಎಂದು ದೂರಿದರು.
ಮಳೆ ಬಂದಿಲ್ಲ ಎನ್ನುವುದು ಗೊತ್ತು, ನೀರು ಸಂಗ್ರಹವಾಗಿಲ್ಲ ಎನ್ನುವುದೂ ಗೊತ್ತು. ನೀರು ಬಿಡುವ ಹಾಗೂ ಬಿಡದೆ ಇರುವ ಅಧಿಕಾರ ನಿಮ್ಮ ಕೈಯಲ್ಲಿಯೇ ಇದೆ. ಆದರೂ ನೀವು ಪ್ರಧಾನಿಯನ್ನು ಏಕೆ ಎಳೆದು ತರುತ್ತಿದ್ದೀರಿ, ನೀರು ಇದ್ದರೆ ಪ್ರಧಾನಿ ಮಧ್ಯ ಪ್ರವೇಶ ಮಾಡಿ ನೀರು ಬಿಡಿ ಎನ್ನಬಹುದು. ಆದರೆ ಈಗ ನೀರಿಲ್ಲ ಏನೂ ಮಾಡಬೇಕು? ಅನಾವಶ್ಯಕವಾಗಿ ಸಿದ್ದರಾಮಯ್ಯ ಮೋದಿ ಅವರನ್ನು ಈ ವಿಚಾರದಲ್ಲಿ ಎಳೆದು ತಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮೇಲ್ಬಾಗದ ನೀರು ಕೆಳಗಡೆ ಹೋದ ನಂತರ ವಾಪಸ್ ತರಲು ಸಾಧ್ಯವಿಲ್ಲ. ಮೇಲ್ಭಾಗದಲ್ಲಿಯೇ ಇದ್ದರೆ ಕೆಳಭಾಗಕ್ಕೆ ಯಾವಾಗ ಬೇಕಾದರೂ ಬಿಡಬಹುದು. ಕುಡಿಯುವುದನ್ನು ಸಮಸ್ಯೆ ಆದಾಗ ನೀರು ಬಿಡಬಹುದು ಇದಕ್ಕೆ ನಾವು ವಿರೋಧ ಮಾಡುವುದಿಲ್ಲ ಎಂದು ಡಿಎಂಕೆ ನಾಯಕರಿಗೆ ಹೇಳಬಹುದಿತ್ತು. ಆದರೆ, ಅದರ ಬದಲು ರಾಜಕೀಯ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಕ್ಷುಲ್ಲಕ ರಾಜಕಾರಣ, ಇಂತಹ ವೋಟ್ ಬ್ಯಾಂಕ್ ರಾಜಕಾರಣ ಕೈಬಿಡಿ, ನಮ್ಮ ಜನಕ್ಕೆ ನೀರು ಕೊಡಿ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಿ ಎನ್ನುವುದಷ್ಟೇ ಅಷ್ಟೇ ನನ್ನ ಮನವಿ ಎಂದರು.
ವಿದ್ಯುತ್ ಕೊರತೆ: ವಿದ್ಯುತ್ ಕೂಡ ಇವತ್ತು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಕೊಳೆವೆ ಬಾವಿಯಿಂದ ನೀರು ತೆಗೆಯಲು ವಿದ್ಯುತ್ ನೀಡುತ್ತಿಲ್ಲ. ಒಂದು ಕಡೆ ನೀರಿನ ಸಮಸ್ಯೆ ಮತ್ತೊಂದು ಕಡೆ ವಿದ್ಯುತ್ ಸಮಸ್ಯೆ ರೈತರಿಗೆ ದೊಡ್ಡ ಸಮಸ್ಯೆ ತಂದಿದೆ. ನೀರು, ವಿದ್ಯುತ್ ಸರಿಯಾಗಿ ಕೊಡದೆ ಕಾಂಗ್ರೆಸ್ ಸರ್ಕಾರ ರಾಜಕಾರಣ ಮಾಡುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಗ್ಯಾರಂಟಿಯೂ ಇಲ್ಲ, ಅಭಿವೃದ್ಧಿಯೂ ಇಲ್ಲ: ಬೆಂಗಳೂರು ಹೊರತು ಬೇರೆ ಕಡೆ ಅಭಿವೃದ್ಧಿ ಕಾಮಗಾರಿ ನಡೆಯದ ಕುರಿತು ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ಬೆಂಗಳೂರು ಹಾಲು ಕರೆಯುವ ದನ ಹಾಗಾಗಿ ಇಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದಾರೆ, ಆದರೆ ಇನ್ನುಳಿದಂತೆ ಅಭಿವೃದ್ಧಿ ಏನೂ ಇಲ್ಲ, ನಿಮ್ಮ ಗ್ಯಾರಂಟಿ ಯೋಜನೆಗಳ ಕಾರಣಕ್ಕಾಗಿ ಯಾವುದೇ ಇಲಾಖೆಗೂ ಕೊಡಲು ಹಣ ಇಲ್ಲ ಅಭಿವೃದ್ಧಿ ಕೆಲಸವನ್ನ ಎಲ್ಲಿ ಮಾಡುತ್ತಿದ್ದೀರಿ? ಹೇಗೆ ಮಾಡುತ್ತಿದ್ದೀರಿ? ವಿದ್ಯುತ್ ಕೊಡಬೇಕು, ರಸ್ತೆ ಮಾಡಬೇಕು, ಅಭಿವೃದ್ಧಿ ಮಾಡಬೇಕು. ಆದರೆ ಇದಕ್ಕೆಲ್ಲ ನಿಮ್ಮ ಬಳಿ ಹಣ ಇಲ್ಲ. ಗ್ಯಾರಂಟಿ ಏನಾದರೂ ಪೂರ್ಣ ಪ್ರಮಾಣದಲ್ಲಿ ಕೊಟ್ಟಿದ್ದೀರಾ ಅದು ಇಲ್ಲ, ಕೇವಲ ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈಶಾನ್ಯ ಭಾಗದ ಜನರು ಬೆಂಗಳೂರಿಗೆ ಬಂದು ಉದ್ಯೋಗ ಕಂಡುಕೊಂಡಿದ್ದಾರೆ, ಇವರಲ್ಲಿ ಬಹುಪಾಲು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಜನರು, ಇವರ ಬಳಿ ತಿಂಗಳಿಗೆ 15,000 ಸಂಗ್ರಹ ಮಾಡಲು ಬಿಬಿಎಂಪಿಯವರು ಸರ್ಕಾರದ ನಿರ್ದೇಶನದ ಮೇರೆಗೆ ಹೊರಟಿದ್ದಾರೆ, ಇಷ್ಟು ಹಣ ಹೇಗೆ ಕೊಡಲು ಸಾಧ್ಯ? ನಾವು ಬೆಂಗಳೂರು ತೊರೆಯುವುದೇ ಉತ್ತಮ ಎನ್ನುತ್ತಿದ್ದಾರೆ ಸಣ್ಣಪುಟ್ಟ, ರಸ್ತೆ ಬದಿ, ತಳ್ಳುಗಾಡಿ ವ್ಯಾಪಾರಿಗಳು. ಪಾಲಿಕೆಗೆ ತಿಂಗಳಿಗೆ 15000 ಕೊಡಬೇಕು ಎಂದರೆ ಅವರು ಬದುಕುಲು ಸಾಧ್ಯವಿಲ್ಲ.
ಅಧಿಕಾರಿಗಳ ಅಸಮಾಧಾನ: ಯಾವ ಅಧಿಕಾರಿಯು ಸಮಾಧಾನದಿಂದ ಇಲ್ಲ, ಮೇಲಿನಿಂದ ಕೆಳಗಿನ ತನಕ ಅಧಿಕಾರಿಗಳು ಅಸಮಧಾನಕ್ಕೊಳಗಾಗಿದ್ದಾರೆ. ಹತ್ತರಿಂದ ಹದಿನೈದು ಐಎಎಸ್ ಅಧಿಕಾರಿ ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಮಾಡಿ ಪೋಸ್ಟಿಂಗ್ ಕೊಟ್ಟಿಲ್ಲ. ಅವರು ಎಲ್ಲಿಗೆ ಹೋಗಬೇಕು? ಜಿಲ್ಲಾಧಿಕಾರಿಗೆ ವರ್ಗಾವಣೆ ಮಾಡಿದ್ದಾರೆ ಹೊಸ ಜಾಗ ತೋರಿಸಿಲ್ಲ ಹೊಸಬರು ಅಲ್ಲಿಗೆ ಬಂದಿದ್ದಾರೆ. ಇರುವವರು ಮನೆ ಖಾಲಿ ಮಾಡಲಾಗದೆ ಎಲ್ಲಿಗೆ ಹೋಗಬೇಕೆಂದು ಗೊಂದಲದಲ್ಲಿ ಸಿಲುಕಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮಂಡ್ಯ: ಕಾವೇರಿ ನದಿಗಿಳಿದು ರೈತರಿಂದ ಪ್ರತಿಭಟನೆ