ಬೆಂಗಳೂರು : ಕಲಬುರಗಿ ಮಹಾನಗರ ಪಾಲಿಕೆಯ ಗದ್ದುಗೆ ಹಿಡಿಯಲು ಐವರು ವಿಧಾನ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದ ಬಿಜೆಪಿಗೆ ನ್ಯಾಯಾಲಯದಲ್ಲಿ ತೀವ್ರ ಮುಖಭಂಗವಾಗಿದೆ. ಇನ್ನಾದರೂ ಜನಾದೇಶಕ್ಕೆ ಆ ಪಕ್ಷ ಬೆಲೆ ನೀಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನ ಭಾರತದಲ್ಲಿದೆ. ಅದರ ತಳಹದಿಯ ಮೇಲೆ ಪ್ರಜಾಪ್ರಭುತ್ವ ಗಟ್ಟಿಯಾಗಿದೆ. ಆದರೆ, ಬಿಜೆಪಿ ತನ್ನ ಅಧಿಕಾರ ದಾಹಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದಿಂದ ಸಂಸತ್ತಿನವರೆಗೆ ವಾಮಮಾರ್ಗ ಅನುಸರಿಸುತ್ತಿದೆ.
ಬಿಜೆಪಿ ಇನ್ನು ಮುಂದಾದರೂ ಅಧಿಕಾರದ ಹಪಾಹಪಿ ಬಿಟ್ಟು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯದಂತೆ ನಡೆಯಬೇಕು ಎಂದು ಖಂಡ್ರೆ ಹೇಳಿದ್ದಾರೆ. ಕಲಬರಗಿಯ ಜನತೆ ಆಡಳಿತಾರೂಢ ಬಿಜೆಪಿಯನ್ನು ತಿರಸ್ಕರಿಸಿದ್ದರೂ, ಇಲ್ಲಿಗೆ ಸಂಬಂಧಪಡದ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿತ್ತು.
ಇಂದು ಹಳೆ ಮತದಾರರ ಪಟ್ಟಿಯಂತೆಯೇ ಮೇಯರ್ ಚುನಾವಣೆ ನಡೆಸಲು ನ್ಯಾಯಾಲಯ ಆದೇಶಿಸಿದ್ದು, ಕಾಂಗ್ರೆಸ್ ಪಕ್ಷಕ್ಕೆ ಈ ಕಾನೂನು ಹೋರಾಟದಲ್ಲಿ ಜಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.