ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡಿದ ಬಳಿಕ ಮದ್ಯ ಮಾರಾಟ ಹಾಗೂ ನಿಷೇಧಿಸುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿಲೇ ಬಂದಿವೆ. ಒಂದಷ್ಟು ಜನ ಮದ್ಯ ನಿಷೇಧಕ್ಕೆ ಇದೇ ಸೂಕ್ತ ಕಾಲ ಎಂದು ಅಭಿಪ್ರಾಯಪಟ್ಟರೆ, ಹೆಚ್ಚಿನವರು ಇದು ಸರಿಯಾದ ಕ್ರಮವಲ್ಲ ಎಂದು ವಾದಿಸುತ್ತಿದ್ದಾರೆ. ಹೀಗೆ ಮದ್ಯ ನಿಷೇಧವನ್ನು ತೀವ್ರವಾಗಿ ವಿರೋಧಿಸುತ್ತಿರುವವರು ಮದ್ಯ ಪ್ರಿಯರೆಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಮದ್ಯ ಪ್ರಿಯರು ಮತ್ತು ವಿರೋಧಿಗಳು ಏನೇ ಹೇಳಿದರೂ ವಾಸ್ತವಾಂಶಗಳು ನಿಷೇಧ ಸೂಕ್ತ ಅಲ್ಲವೇ ಎಂಬುದರ ಮೇಲೆ ಬೆಳಕು ಚೆಲ್ಲುತ್ತವೆ.
ಕೊರೊನಾ ಭೀತಿಯಲ್ಲಿ ಲಾಕ್‌ಡೌನ್ ಜಾರಿ ಮಾಡಿದ ನಂತರ ಮದ್ಯ ಮಾರಾಟವನ್ನೂ ನಿಷೇಧಿಸಲಾಯಿತು. ಹೀಗೆ ಮದ್ಯ ಮಾರಾಟ ನಿಷೇಧಿಸಿದ ನಂತರದ ಒಂದೆರಡು ವಾರಗಳ ಅವಧಿಯಲ್ಲಿ ಮದ್ಯಕ್ಕೆ ದಾಸರಾಗಿದ್ದ 20ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಯ ದಾರಿ ಹಿಡಿದರು. ಈ ವೇಳೆ ಕೊರೊನಾ ಬಂದು ಮೃತಪಟ್ಟವರಿಗಿಂತ ಮದ್ಯ ಸಿಗದೆ ಮೃತಪಟ್ಟವರ ಸಂಖ್ಯೆಯೇ ಹೆಚ್ಚಿತ್ತು. ನಂತರ ಮದ್ಯ ಮಾರಾಟ ನಿಷೇಧಿಸಿದ ಸರ್ಕಾರವನ್ನು ಮದ್ಯಪ್ರಿಯರು ವಾಚಾಮಗೋಚರ ನಿಂದಿಸಿದರು. ಆಗಲೂ ಮದ್ಯ ಸಿಗದಿದ್ದಾಗ ತೆಪ್ಪಗಾದರು. ಕುಡಿತದ ಕಾರಣಕ್ಕಾಗುತ್ತಿದ್ದ ಗಲಾಟೆಗಳು ದೂರವಾದವು.
ಇವೆಲ್ಲವನ್ನೂ ಗಮನಿಸಿಯೇ ಹಿರಿಯ ಕಾಂಗ್ರೆಸ್ ನಾಯಕ ಹೆಚ್.ಕೆ.ಪಾಟೀಲ್ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಮದ್ಯ ಮಾರಾಟ ನಿಂತು ಹೋದ ಬಳಿಕ 40 ದಿನಗಳ ಕಾಲ ಜನ ಕುಡಿತವನ್ನು ಮರೆತು ಕುಟುಂಬದೊಂದಿಗೆ ನೆಮ್ಮದಿಯಿಂದಿದ್ದಾರೆ. ಈ ನೆಮ್ಮದಿ ಹೀಗೇ ಉಳಿಯಬೇಕಾದರೆ, ಮಕ್ಕಳು ಸಂಸ್ಕಾರವಂತರಾಗಬೇಕಾದರೆ, ಹೆಣ್ಣುಮಕ್ಕಳು ಶೋಷಣೆಯಾಗಬಾರದು ಎಂಬುದಾದರೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಪೂರಕವಾಗಿ ಧಾರ್ಮಿಕ ನಾಯಕರುಗಳಾದ ಬಾಳೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಕುಡಿತ ವಿರೋಧಿ ಹೋರಾಟಗಾರರು, ಕಾರ್ಯಕರ್ತರು, ವಿಶೇಷವಾಗಿ ಮಹಿಳೆಯರು ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.
ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸುವುದರಿಂದ ರಾಜ್ಯದ ಆರ್ಥಿಕತೆಗೆ ಪೆಟ್ಟು ಬೀಳುತ್ತದೆಯಾದರೂ ಸಮಾಜದ ನೆಮ್ಮದಿ ಹೆಚ್ಚಾಗುತ್ತದೆ. ಕುಡಿತದಿಂದಾಗುತ್ತಿದ್ದ ಮಹಿಳೆಯರ ಶೋಷಣೆ, ಕೌಟುಂಬಿಕ ಕಲಹ, ಕಳ್ಳತನ, ಅನಾರೋಗ್ಯ ದೂರವಾಗುತ್ತವೆ. ಕುಡಿತವನ್ನು ತಪ್ಪಿಸಲು ಮದ್ಯ ನಿಷೇಧಿಸುವಂತೆ ಒತ್ತಾಯಿಸುತ್ತಿರುವ ಬಹುತೇಕರ ಕಾಳಜಿ ಇವುಗಳ ಸುತ್ತಲೇ ಇದೆ. ಇದನ್ನೇ ಪ್ರತಿಪಾದಿಸುವ ನಿಮ್ಹಾನ್ಸ್ನ ಡಾ. ಬಿ.ಎನ್.ಗಂಗಾಧರ್ ಹಾಗೂ ಖ್ಯಾತ ಮನೋವೈದ್ಯ ಡಾ. ಸಿ.ಆರ್.ಚಂದ್ರಶೇಖರ್ ಅವರಂತಹ ಮನೋವೈದ್ಯರು ಕೂಡ ಕುಡಿತ ಬಿಡಲು ಇದೇ ಸೂಕ್ತ ಸಮಯ ಎನ್ನುತ್ತಾರೆ. ಕುಡಿತಕ್ಕೆ ದಾಸರಾಗಿದ್ದ ಶೇ. 79 ರಷ್ಟು ಮಂದಿ ವಿತ್ಡ್ರಾವೆಲ್ ಎಫೆಕ್ಟ್‌ನಿಂದಲೂ ಮುಕ್ತವಾಗಿದ್ದಾರೆ. ಈ ಸಂದರ್ಭದಲ್ಲೇ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿದರೆ ಹೆಚ್ಚು ಸೂಕ್ತ ಎನ್ನುತ್ತಾರೆ.
ಆದರೆ, ವಾಸ್ತವ ಸಂಗತಿಗಳು ಮದ್ಯ ಮಾರಾಟ ನಿಷೇಧಕ್ಕೆ ಸಂಪೂರ್ಣ ವಿರುದ್ಧವಾಗಿವೆ. ಮದ್ಯ ನಿಷೇಧಿಸುವ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ ಹೆಗ್ಡೆ, ಮದ್ಯ ತಯಾರಿಕೆ ಮತ್ತು ಮಾರಾಟದ ಉದ್ಯಮದಲ್ಲಿ 1.20 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಈ ಉದ್ಯಮವನ್ನೇ ನಂಬಿ 2 ಲಕ್ಷ ಕುಟುಂಬಗಳು ಜೀವನ ನಡೆಸುತ್ತಿವೆ. ಮದ್ಯ ನಿಷೇಧಿಸಿದರೆ ಉದ್ಯಮ ಮತ್ತು ನೌಕರರ ಗತಿ ಏನು ಎಂದು ಪ್ರಶ್ನಿಸಿದ್ದಾರೆ.
ಲಾಕ್‌ಡೌನ್ ಬಳಿಕ ಮದ್ಯಪ್ರಿಯರ ಬೇಡಿಕೆಯನ್ನು ಹಣದಾಹಿಗಳು ಕಳ್ಳ ಸಾಗಣೆ ಮೂಲಕ ಪೂರೈಸಿದರು. ಬಾರ್ಗಳ ಮಾಲೀಕರು ಮತ್ತು ಸಿಬ್ಬಂದಿಯೇ ಹೆಚ್ಚಿನ ಹಣಕ್ಕೆ ತಮ್ಮಲ್ಲಿದ್ದ ಮದ್ಯ ಮಾರಾಟ ಮಾಡಿದರು. ಇಷ್ಟಲ್ಲದೇ ಕಳ್ಳಭಟ್ಟಿ ತಯಾರಿಕೆ ಮತ್ತು ಪೂರೈಕೆ ಜಾಲಗಳೇ ಸೃಷ್ಟಿಯಾದವು. ಇದೀಗ ಮದ್ಯ ಮಾರಾಟ ನಿಲ್ಲಿಸಿದ್ದೇ ಆದಲ್ಲಿ ಕಳ್ಳಭಟ್ಟಿ ತಯಾರಕರಿಗೆ ದಿಡ್ಡಿ ಬಾಗಿಲು ತೆಗೆದು ಕೊಳ್ಳೆ ಹೊಡೆಯಲು ಬಿಟ್ಟಂತಾಗುತ್ತದೆ. ಇನ್ನು ಅಧಿಕೃತ ಮದ್ಯ ತಯಾರಕರು ಅಥವಾ ಡಿಸ್ಟಲರೀಸ್‌ಗಳು ತಾವು ಸಿದ್ಧಪಡಿಸುವ ಮದ್ಯದಲ್ಲಿನ ಆಲ್ಕೋಹಾಲ್ ಇಂತಿಷ್ಟೇ ಇರಬೇಕೆಂಬ ನಿಯಮವನ್ನು ಪಾಲಿಸುತ್ತಾರೆ. ಆದರೆ, ಹಣದಾಸೆಗೆ ಕಳ್ಳಭಟ್ಟಿ ಕಾಯಿಸುವವರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಾರೆ. ಇದಕ್ಕೆ ಇತಿಹಾಸದುದ್ದಕ್ಕೂ ಸಾಕ್ಷಿಗಳಿವೆ. ಇಂತಹ ಕಳ್ಳಭಟ್ಟಿ ದಂಧೆ ನಿಯಂತ್ರಣ ಮಾಡುವುದು ಕೂಡ ಸರ್ಕಾರಕ್ಕೆ ದೊಡ್ಡ ತಲೆನೋವಾಗಲಿದೆ.
ಇನ್ನು, ಮದ್ಯ ಮಾರಾಟ ಮತ್ತು ಇದಕ್ಕೆ ಪೂರಕವಾದ ಕ್ಷೇತ್ರದಿಂದ ರಾಜ್ಯದ ಶೇ. 25ರಷ್ಟು ತೆರಿಗೆ ಬರುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮದ್ಯ ಮಾರಾಟದಿಂದ 22 ಸಾವಿರ ಕೋಟಿ ಆದಾಯದ ನಿರೀಕ್ಷೆ ಇದೆ. ಮದ್ಯ ಮಾರಾಟ ನಿಷೇಧಿಸಿದ್ದೇ ಆದಲ್ಲಿ ರಾಜಸ್ವ ಕುಂಠಿತವಾಗಿ ಅಭಿವೃದ್ಧಿ ಕಾರ್ಯಗಳ ಮೇಲೆ ಹೊಡೆತ ಬೀಳಲಿದೆ. ಹೀಗಾಗಿಯೇ ಮದ್ಯ ಮಾರಾಟ ನಿಷೇಧ ಮಾಡಿದ್ದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳು ಪರಿಸ್ಥಿತಿ ಅರ್ಥವಾಗುತ್ತಲೇ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದ ಉದಾಹರಣೆ ಇದೆ.
ಈಗಲೂ ಗುಜರಾತ್, ಬಿಹಾರ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಮದ್ಯ ನಿಷೇಧ ಜಾರಿಯಲ್ಲಿದೆ. ಹಾಗಂತ ಈ ರಾಜ್ಯಗಳಲ್ಲಿ ಮದ್ಯವೇ ಸಿಗುತ್ತಿಲ್ಲ ಎನ್ನಲಾಗದು. ಈ ರಾಜ್ಯಗಳಲ್ಲಿ ಕಳ್ಳಭಟ್ಟಿ ದಂಧೆ ವ್ಯಾಪಕವಾಗಿದೆ. ನೆರೆ ರಾಜ್ಯಗಳಿಂದಲೂ ಅಕ್ರಮವಾಗಿ ದೊಡ್ಡ ಮಟ್ಟದಲ್ಲಿ ಮದ್ಯ ಸರಬರಾಜಾಗುತ್ತಿದೆ. ಇಲ್ಲಿನ ಪರಿಸ್ಥಿತಿಗಳನ್ನು ಗಮನಿಸಿದಾಗ ಮದ್ಯ ನಿಷೇಧಿಸುವುದು ಅಷ್ಟು ಸುಲಭವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಿರುವ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ಮೇ. 4ರಿಂದ ಮದ್ಯ ಮಾರಾಟ ಆರಂಭವಾಗಲಿದೆ. ಅದರಂತೆ ಅಬಕಾರಿ ಇಲಾಖೆ ಮದ್ಯದಂಗಡಿಗಳಿಗೆ ಮಾರಾಟ ಮಾಡಲು ಅನುಮತಿಯನ್ನೂ ನೀಡಿದೆ. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರಕ್ಕೆ ಅಬಕಾರಿ ಹೊರತುಪಡಿಸಿ ಬೇರಾವುದೇ ಕ್ಷೇತ್ರದಿಂದ ತಕ್ಷಣದ ಆದಾಯ ಲಭ್ಯವಿಲ್ಲ. ಹೀಗೆ ವಾಸ್ತವಾಂಶಗಳನ್ನು ಗಮನಿಸಿದಾಗ ರಾಜ್ಯ ಸರ್ಕಾರ ಮದ್ಯ ಮಾರಾಟ ನಿಷೇಧಿಸುತ್ತದೆ ಎಂದು ನಿರೀಕ್ಷಿಸುವುದು ಸದ್ಯಕ್ಕಂತೂ ಸಾಧ್ಯವಿಲ್ಲ.