ಬೆಂಗಳೂರು: ಶಾಂತಿನಗರ ಶಾಸಕ ಎನ್. ಎ. ಹ್ಯಾರಿಸ್ ಮೂಡಿಸಿರುವ ಆತಂಕ ಕಾಂಗ್ರೆಸ್ ಶಾಸಕರನ್ನು ಕಂಗಾಲಾಗಿಸಿದೆ.
ಕೊರೊನಾ ತಪಾಸಣೆಗೆ ಒಳಗಾಗಿ ವರದಿ ಬರುವುದು ವಿಳಂಬವಾಗಲಿದೆ ಎಂಬ ಮಾಹಿತಿ ಬಂದ ಹಿನ್ನೆಲೆ ನಗರದ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿದ್ದ, ಕಾಂಗ್ರೆಸ್ ಶಾಸಕಾಂಗ ಸಭೆಗೆ ಶಾಸಕ ಎನ್. ಎ. ಹ್ಯಾರಿಸ್ ಆಗಮಿಸಿದ್ದರು. ಮಧ್ಯಾಹ್ನ ಊಟದ ವಿರಾಮದ ವೇಳೆ ಏಕಾಏಕಿ ಹೊರ ನಡೆದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ತಮ್ಮ ಮೊಬೈಲ್ಗೆ ಬಂದ ಸಂದೇಶ ನೋಡಿ ತಕ್ಷಣ ಅವರು ಅಲ್ಲಿಂದ ತೆರಳಿದ್ದಾರೆ ಎಂಬ ಮಾಹಿತಿ ಇದ್ದು, ಬಹುಶಃ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಅನುಮಾನಿಲಾಗುತ್ತಿದೆ.
ನಿನ್ನೆ ಕೋವಿಡ್ ಟೆಸ್ಟ್ ಮಾಡಿಸಿದ್ದ ಶಾಸಕ ಹ್ಯಾರಿಸ್ ಇಂದು ವರದಿ ಬರುವ ಮುನ್ನವೇ ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡಿದ್ದು, ಇದೀಗ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಯಾರಿಗೂ ಹೇಳದೆ ಏಕಾಏಕಿ ಅವರು ತೆರಳಿರುವುದು ಕೂಡ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂದು ಅವರ ಜೊತೆ ಮಾತುಕತೆ ನಡೆಸಿ ಜೊತೆಯಲ್ಲಿ ಕುಳಿತು, ಒಟ್ಟಿಗೆ ಊಟ ಮಾಡಿದ ಹಲವು ಶಾಸಕರಲ್ಲಿ ಆತಂಕ ಮನೆಮಾಡಿದೆ.
ಶಾಸಕಾಂಗ ಸಭೆಯಿಂದ ಏಕಾಏಕಿ ಹ್ಯಾರಿಸ್ ಎದ್ದು ಹೋಗಿದ್ದು, ಅವರ ತಪಾಸಣೆ ವರದಿ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಚಾರವನ್ನು ಹ್ಯಾರಿಸ್ ಇದುವರೆಗೂ ಸ್ಪಷ್ಟಪಡಿಸಿಲ್ಲ. ತಮ್ಮನ್ನು ಸಂಪರ್ಕಿಸಿದ ಮಾಧ್ಯಮದವರಿಗೂ ತಾವು ಆರೋಗ್ಯವಾಗಿದ್ದು, ಕೋವಿಡ್-19 ಪಾಸಿಟಿವ್ ವರದಿ ಬಂದಿಲ್ಲ ಎಂದು ತಿಳಿಸಿದ್ದಾರೆ.
ಆದರೆ ಮೂಲಗಳ ಪ್ರಕಾರ ಹ್ಯಾರಿಸ್ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಬಹುತೇಕ ಶಾಸಕರು ಹೋಮ್ ಕ್ವಾರಂಟೈನ್ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 21ರಿಂದ ವಿಧಾನಮಂಡಲ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಅತ್ಯಂತ ಮಹತ್ವದ ಹಾಗೂ ಪ್ರಮುಖ ವಿಚಾರಗಳ ಮೇಲೆ ಚರ್ಚೆ ಕೈಗೊಳ್ಳಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಆದರೆ ಇಂದು ಹ್ಯಾರಿಸ್ ಹತ್ತು-ಹನ್ನೆರಡು ಶಾಸಕರ ಜೊತೆ ಸಾಕಷ್ಟು ಆಪ್ತವಾಗಿ ಸಮಾಲೋಚಿಸಿದ್ದಾರೆ. ಈ ಸಂದರ್ಭ ಅವರು ಮಾಸ್ಕ್ ಕೂಡ ಧರಿಸಿರಲಿಲ್ಲ ಎಂಬ ಮಾಹಿತಿ ಇದೆ. ಈ ಹಿನ್ನೆಲೆ ಹಲವು ಶಾಸಕರು ಆತಂಕಕ್ಕೆ ಒಳಗಾಗಿದ್ದು, ವಿಚಾರ ತಿಳಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಕೂಡ ಹ್ಯಾರಿಸ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ.