ಬೆಂಗಳೂರು: ಡ್ರಗ್ಸ್ ಜಾಲದ ನಂಟು ಆರೋಪದಲ್ಲಿ ಸಿಕ್ಕಿಹಾಕಿಕೊಂಡಿರುವ ಆರೋಪಿಗಳಿಗೆ ಮತ್ತೊಂದು ಕಂಟಕ ಎದುರಾಗಿದ್ದು, ಆರೋಪಿಗಳು ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಶುರು ಮಾಡಿದೆ.
ಇಡಿ ಅಧಿಕಾರಿಗಳು ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿಯರಾದ ರಾಗಿಣಿ, ಸಂಜನಾ ಮತ್ತು ಇವರ ಆಪ್ತರನ್ನು ವಿಚಾರಣೆಗೆ ಒಳಪಡಿಸಿದೆ. ಈ ವೇಳೆ ಹಲವು ಡ್ರಗ್ಸ್ ಪೆಡ್ಲರ್ಗಳು ಅಕ್ರಮ ಹಣದ ವಹಿವಾಟಿನಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಇಡಿ ಪೆಡ್ಲರ್ಗಳ ಹಿಂದೆ ಬಿದ್ದಿದ್ದು, ಯಾರೆಲ್ಲಾ ಹೇಗೆ ಹಣ ವರ್ಗಾವಣೆ ಮಾಡುತ್ತಿದ್ದರು ಎಂಬ ಮಾಹಿತಿ ಕಲೆಹಾಕುತ್ತಿದೆ. ಇದರ ಜೊತೆಗೆ ಬಹುತೇಕ ಆರೋಪಿಗಳು ಎಂಡಿಎಂಎ, ಹ್ಯಾಶಿಸ್, ಎಲ್ಎಸ್ಡಿ, ಆಫೀಮು, ಬ್ರೌನ್ ಶುಗರ್ನಂತಹ ಮಾದಕ ವಸ್ತುಗಳನ್ನು ವಿದೇಶಗಳಿಂದ ಖರೀದಿ ಮಾಡಿ ತಮ್ಮ ಗ್ಯಾಂಗ್ಗೆ ರವಾನೆ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಡ್ರಗ್ಸ್ ರವಾನೆ ಮಾಡುವಾಗ ಹಲವಾರು ರೀತಿಯಲ್ಲಿ ಅಕ್ರಮ ಹಣ ಕೂಡ ವರ್ಗಾವಣೆಯಾಗಿರುವ ಮಾಹಿತಿ ಸಾಕ್ಷ್ಯ ಸಮೇತ ಅಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಾಗಿ ನಟಿಯರ ವಿಚಾರಣೆ ಜೊತೆ ನಟಿಯರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಪೆಡ್ಲರ್ಗಳ ಜನ್ಮ ಜಾಲಾಡಲು ಇಡಿ ಮುಂದಾಗಿದೆ. ಈಗಾಗಲೇ ಬಂಧಿತ ಆರೋಪಿಗಳಿಂದ ಕೆಲ ಪೆಡ್ಲರ್ಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡ ಆರೋಪಿಗಳಿಗೆ ಹುಡುಕಾಟ ನಡೆಸಿ, ಅವರ ಆಸ್ತಿ ಬಗ್ಗೆ ಮಾಹಿತಿ ಕಲೆಹಾಕಲಾಗ್ತಿದೆ.
ಮತ್ತೊಂದೆಡೆ ಪರಪ್ಪನ ಅಗ್ರಹಾರದಲ್ಲಿ ನಟಿಮಣಿಯರನ್ನ ಇಡಿ ವಿಚಾರಣೆಗೆ ಒಳಪಡಿಸಿದೆ. ತನಿಖೆ ವೇಳೆ ಆರೋಪಿ ನಟಿಯರು ಸರಿಯಾದ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ. ಆಸ್ತಿ ವಿಚಾರ ಕೇಳಿದರೆ, ನಾವು ಕಷ್ಟಪಟ್ಟು ಸಿನಿಮಾ ಮಾಡಿ ಬಂದ ಹಣದಿಂದ ಖರೀದಿಸಿದ್ದೇವೆ. ಯಾವುದೇ ಅಕ್ರಮ ಹಣದ ವಹಿವಾಟು ಮಾಡಿಲ್ಲ ಎಂಬ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.