ಬೆಂಗಳೂರು: ವಿಧಾನಸೌಧ ದ್ವಾರದ ಬಳಿ ಯಾವುದೋ ಒಬ್ಬ ಇಂಜಿನಿಯರ್ ದುಡ್ಡು ತೆಗೆದುಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿದೆ. ಆತ ಎಲ್ಲಿಗೆ, ಯಾರಿಗೆ ಕೊಡಲು ಅಷ್ಟೊಂದು ಹಣ ತೆಗೆದುಕೊಂಡು ಹೋಗುತ್ತಿದ್ದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾರೇ ಇದ್ದರೂ ಶಿಕ್ಷೆ ಕೊಡುವ ಕೆಲಸ ನಾವು ಮಾಡುತ್ತೇವೆ. ಆದರೆ ನಮ್ಮ ವಿರುದ್ಧ ಆರೋಪಿಸುವ ಸಿದ್ದರಾಮಯ್ಯ ಅವರು ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ 25 ಲಕ್ಷ ಹಣ ಸಿಕ್ಕ ಪ್ರಕರಣ ಏನಾಯಿತು ಅಂತಾ ನೆನಪಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ನಗರದ ಖಾಸಗಿ ತಾರಾ ಹೋಟೆಟ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೋ ಒಬ್ಬ ಇಂಜಿನಿಯರ್ ಹಣ ತೆಗೆದುಕೊಂಡು ಹೋಗುತ್ತಿರುವಾಗ ಸ್ಕ್ಯಾನಿಂಗ್ ಮಾಡುವ ವೇಳೆ ನಮ್ಮ ಪೊಲೀಸರು ಹಣ ಆತನನ್ನು ಹಿಡಿದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ, ತೀವ್ರಗತಿಯಲ್ಲಿ ತನಿಖೆ ನಡೆಯುತ್ತಿದೆ. ಎಲ್ಲಿಂದ ತೆಗೆದುಕೊಂಡು ಬಂದ, ಯಾರಿಗೆ ಕೊಡಲು ತೆಗೆದುಕೊಂಡು ಬಂದಿದ್ದ, ಎಂಬೆಲ್ಲದರ ಬಗ್ಗೆ ತನಿಖೆ ನಡೆಸಲಾಗುವುದು. ಯಾರೇ ಇದ್ದರೂ ಶಿಕ್ಷೆ ಕೊಡುವ ಕೆಲಸ ನಾವು ಮಾಡುತ್ತೇವೆ ಎಂದರು.
ಯಾವ ನೈತಿಕತೆ ಇದೆ?: ಈ ಬಗ್ಗೆ ಕಾಂಗ್ರೆಸ್ನವರು ಬಹಳ ದೊಡ್ಡ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಜಾಣಮರೆವು ಇರುವಂತಿದೆ. ಅವರು ಸಿಎಂ ಆಗಿದ್ದಾಗ ತಮ್ಮ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿಯೇ 25 ಲಕ್ಷ ನಗದು ಸಿಕ್ಕಿತ್ತು ಆಗ ಏನು ಕ್ರಮ ಕೈಗೊಂಡಿದ್ದೀರಿ? ತಂದವನು ಮತ್ತು ಕೊಟ್ಟವನನ್ನು ಹಿಡಿದಿದ್ದೀರಾ? ಸಚಿವರನ್ನು ತೆಗೆದು ಹಾಕಿದ್ದೀರಾ? ಯಾವ ನೈತಿಕತೆ ಇದೆ ನಿಮಗೆ ನಮ್ಮ ಬಗ್ಗೆ ಮಾತನಾಡಲು, ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿದವರು ನೀವು, ಲೋಕಾಯುಕ್ತವನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿದವರು ನೀವು ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ವಿಧಾನಸೌಧದ ಗೋಡೆ ಗೋಡೆಯಲ್ಲೂ ಭ್ರಷ್ಟಾಚಾರ ಇದೆ ಎಂದು ಹೇಳುತ್ತಾರೆ. ಇವರು ಇದ್ದಾಗ ವಿಧಾನಸೌಧದ ಗೋಡೆ, ಆಫೀಸ್ ನಿಂತಲ್ಲಿ ಕುಂತಲ್ಲಿ ಎಲ್ಲ ಕಡೆ ಭ್ರಷ್ಟಾಚಾರದ್ದೇ ಪಿಸು ಮಾತು. ನಮಗೆ 40 ಪರ್ಸಂಟೇಜ್ ಅಂತಾರಲ್ಲ, ಪರ್ಸಂಟೇಜ್ ಹುಟ್ಟು ಹಾಕಿದ್ದೆ ಅವರು. ಇದಕ್ಕೆ ಸಾಕ್ಷಿ ಪುರಾವೆ ಇವೆ. ಕೆಲವೊಂದು ಕಡೆ 40 ಪರ್ಸಂಟೇಜ್ ಮೀರಿದ ದಾಖಲೆ ಇದೆ. 10 ಲಕ್ಷಕ್ಕೆ 40 ಪರ್ಸಂಟೇಜ್ ಅಂದರೆ, ಅವರ 25 ಲಕ್ಷಕ್ಕೆ ಎಷ್ಟಾಯ್ತು? ಎಂದು ಸಿಎಂ ಪ್ರಶ್ನಿಸಿದರು.
ಸಿ ಸಿ ಪಾಟೀಲ್ ಸ್ಪಷ್ಟನೆ: ಸಚಿವ ಸಿ ಸಿ ಪಾಟೀಲ್ ಮಾತನಾಡಿ, ನನಗೇ ಹಣ ಕೊಡಬೇಕು ಎಂದಿದ್ದರೆ, ವಿಧಾನಸಭೆಯಲ್ಲಿ ಯಾಕೆ ಕೊಡಬೇಕು? ಬೇರೆ ಕಡೆ ಕೊಡಬಹುದಲ್ಲವೇ? ನನಗೆ ಕೊಡಲು ವಿಧಾನಸೌಧಕ್ಕೆ ಯಾಕೆ ಬರಬೇಕು? ಪೊಲೀಸರು ಈ ಪ್ರಕರಣ ಸಂಬಂಧ ಕ್ರಮ ಕೈಗೊಳ್ಳಲಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ಮಾಡಿರುವ ಆರೋಪ ಸತ್ಯಕ್ಕೆ ದೂರ ಎಂದಿದ್ದಾರೆ.
ಹಣ ಪತ್ತೆ ಪ್ರಕರಣ: ಬುಧವಾರ ವಿಕಾಸಸೌಧಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಬ್ಯಾಗ್ನಲ್ಲಿ 10 ಲಕ್ಷ ರೂಪಾಯಿ ಹಣ ಪತ್ತೆಯಾಗಿತ್ತು. ಹಣ ಹಾಗೂ ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಜಗದೀಶ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಭದ್ರತಾ ಸಿಬ್ಬಂದಿಯ ಮಾಹಿತಿ ಮೇರೆಗೆ ಎಂಜಿನಿಯರ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಜಗದೀಶ್ ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಹಣ ತಂದಿದ್ದು, ಸೂಕ್ತ ದಾಖಲಾತಿ ನೀಡಲು ಸಮಯಾವಕಾಶ ಕೊಡುವಂತೆ ಕೇಳಿಕೊಂಡಿದ್ದಾರೆ' ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದರು.
ಇದನ್ನೂ ಓದಿ: ವಿಕಾಸಸೌಧಕ್ಕೆ ಆಗಮಿಸಿದ ಲೋಕೊಪಯೋಗಿ ಎಂಜಿನಿಯರ್ ಬ್ಯಾಗ್ನಲ್ಲಿ 10 ಲಕ್ಷ ಹಣ ಪತ್ತೆ: ಪ್ರಕರಣ ದಾಖಲು