ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಇಂದು ಹೊಸ 24 ಸಚಿವರು ಸೇರ್ಪಡೆಯಾಗಿದ್ದು, ಈ ಮೂಲಕ ಸರ್ಕಾರದ ಎಲ್ಲ 34 ಸಚಿವ ಸ್ಥಾನಗಳನ್ನು ಭರ್ತಿ ಮಾಡಿದಂತಾಗಿದೆ. ಕಳೆದ ಶನಿವಾರ ಸಂಪುಟ ರಚನೆಯ ಮೊದಲ ಹಂತ ನಡೆದಿತ್ತು. ಸಿಎಂ, ಡಿಸಿಎಂ ಸೇರಿ ಎಂಟು ಸಚಿವರು ಪದಗ್ರಹಣ ಮಾಡಿದ್ದರು. ಸರಿಯಾಗಿ ಒಂದು ವಾರದ ಬಳಿಕ ಇಂದು ರಾಜಭವನದಲ್ಲಿ ಉಳಿದ 24 ಖಾತೆಗಳನ್ನು ಭರ್ತಿ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸೇರಿದ ಕೆಲ ಸಚಿವರ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ.
ಕೆ.ಎನ್ ರಾಜಣ್ಣ: ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದಿಂದ ಆಯ್ಕೆಯಾಗಿರುವ ಹಿರಿಯ ಶಾಸಕ ಕೆ.ಎನ್.ರಾಜಣ್ಣ ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸ್ವತಃ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ರಾಜಣ್ಣ ಕ್ಷೇತ್ರದ ರೈತರಿಗೆ ಸಾಕಷ್ಟು ಸಾಲ ಸೌಲಭ್ಯ ಕಲ್ಪಿಸಿದ್ದಾರೆ. ತಾವು ಶಾಕರಾಗಿದ್ದಾಗ ಮಾಡಿದ ಕೆಲಸ, ಸರ್ಕಾರದಿಂದ ತಂದ ಯೋಜನೆಗಳ ವಿವರ ನೀಡಿದ್ದು ಅವರ ಗೆಲುವಿಗೆ ಪ್ರಮುಖ ಕಾರಣ.
ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ 15 ಚುನಾವಣೆಗಳಲ್ಲಿ 13 ಬಾರಿ ಕ್ಷೇತ್ರದ ಹೊರಗಿನವರೇ ಗೆಲುವು ಸಾಧಿಸಿದ್ದಾರೆ. ಜೊತೆಗೆ 2008ರಿಂದ ಸಾಮಾನ್ಯ ಕ್ಷೇತ್ರವಾದ ಮಧುಗಿರಿಯಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಕೆ.ಎನ್. ರಾಜಣ್ಣ 2013ರಲ್ಲಿ ಗೆದ್ದಿದ್ದರು. 2018ರಲ್ಲಿ ಸೋಲುಂಡಿದ್ದ ಅವರು, ಈ ಬಾರಿ ಅವರು ಜೆಡಿಎಸ್ ಶಾಸಕ ಎಂ. ವೀರಭದ್ರಯ್ಯ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿ ಸಚಿವರಾಗಿದ್ದಾರೆ.
ದಿನೇಶ್ ಗುಂಡೂರಾವ್: ದಿನೇಶ್ ಗುಂಡೂರಾವ್ ಬೆಂಗಳೂರು ನಗರದ ಗಾಂಧಿನಗರ ಕ್ಷೇತ್ರದ ಶಾಸಕ. ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಪುತ್ರ. ಇಂಜಿನಿಯರಿಂಗ್ ಪದವೀಧರರಾದ ದಿನೇಶ್ ಗುಂಡೂರಾವ್ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿ, ಯುವ ಕಾಂಗ್ರೆಸ್ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 1999ರಲ್ಲಿ ಮೊದಲ ಬಾರಿಗೆ ದಿನೇಶ್ ಗುಂಡೂರಾವ್ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿ ವಿಧಾನಸಭೆ ಪ್ರವೇಶಿಸಿದರು. ಈ ಬಾರಿ ಅವರು ಕೇವಲ 105 ಮತಗಳ ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿದ್ದರು.
2004, 2008, 2013 ಮತ್ತು 2018ರ ಚುನಾವಣೆಯಲ್ಲಿಯೂ ದಿನೇಶ್ ಗುಂಡೂರಾವ್ ಗಾಂಧಿನಗರ ಕ್ಷೇತ್ರದಿಂದ ಜಯಗಳಿಸಿದ್ದಾರೆ. 2013ರ ಚುನಾವಣೆಯಲ್ಲಿ ಗೆದ್ದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾಗಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿತ್ತು.
ಶರಣಬಸಪ್ಪ ದರ್ಶನಾಪೂರ್: ಶರಣಬಸಪ್ಪ ದರ್ಶನಾಪುರ ಅವರು 1994, 2004, 2008, 2018 ಮತ್ತು 2023 ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 5 ಅವಧಿಗೆ ಶಹಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಶಹಾಪುರದಿಂದ ಶಾಸಕರಾಗಿ ಮೊದಲ ಬಾರಿಗೆ ಚುನಾಯಿತರಾದ ನಂತರ, ಅವರು 1996 ರಲ್ಲಿ ಜೆ.ಎಚ್. ಪಟೇಲ್ ಕ್ಯಾಬಿನೆಟ್‌ನಲ್ಲಿ ಇಂಧನ ಸಚಿವರಾದರು. ಹೆಚ್ ಡಿ ಕುಮಾರಸ್ವಾಮಿಯವರ ಮೊದಲ ಕ್ಯಾಬಿನೆಟ್‌ನಲ್ಲಿ 18 ಫೆಬ್ರವರಿ 2006 ರಿಂದ 8 ಅಕ್ಟೋಬರ್ 2007 ರವರೆಗೆ ಕೃಷಿ ಮಾರುಕಟ್ಟೆ ಸಚಿವರಾಗಿ ಮತ್ತು ಕಲಬುರುಗಿ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದರು .
2006ರಲ್ಲಿ ಅವರು ಕಲಬುರುಗಿ ಜಿಲ್ಲೆಗೆ ಉಸ್ತುವಾರಿ ಸಚಿವರಾದರು. 2018 ರಲ್ಲಿ, ಅವರು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿ ನೇಮಕಗೊಂಡರು. ಫೆಬ್ರವರಿ 14, 2022 ರಂದು ಅವರು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದ 11 ಇತರ ಶಾಸಕರೊಂದಿಗೆ ಕೆಕೆಆರ್ಡಿಬಿ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದರು. ಇದೀಗ ಸಚಿವರಾಗಿ ಸಿದ್ದರಾಮಯ್ಯ ಸಂಪುಟ ಸೇರಿದ್ದಾರೆ.
ಶಿವಾನಂದ ಪಾಟೀಲ್: ಶಿವಾನಂದ್ ಸಿದ್ದರಾಮಗೌಡ ಪಾಟೀಲ್ 1992ರಲ್ಲಿ ಬಿಜಾಪುರ ಡಿಸಿಸಿ (ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್) ಬ್ಯಾಂಕಿನ ಅಧ್ಯಕ್ಷರಾಗಿ ಚುನಾಯಿತರಾದಾಗ ಇವರು ಸ್ಥಳೀಯ ರಾಜಕಾರಣದಲ್ಲಿ ಮೂಚೂಣಿಗೆ ಬಂದರು. ಜೆಡಿಎಸ್ ಅಭ್ಯರ್ಥಿಯಾಗಿ ತಿಕೋಟಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಶಿವಾನಂದ ಪಾಟೀಲರು ಎಂ.ಬಿ. ಪಾಟೀಲ ವಿರುದ್ಧ ಸೋಲನುಭವಿಸಿದ್ದರು. ಆದರೆ ತದನಂತರ 1994 ಹಾಗೂ 1999 ಎರಡೂ ಚುನಾವಣೆಗಳಲ್ಲಿ ಎಂ.ಬಿ. ಪಾಟೀಲರನ್ನು ಸೋಲಿಸಿ ಸೇಡು ತೀರಿಸಿಕೊಂಡಿದ್ದರು.
1999 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಿವಾನಂದ ಪಾಟೀಲ 2004 ರ ಚುನಾವಣೆಗೂ ಮುನ್ನ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಕರೆಗೆ ಓಗೊಟ್ಟು ಕಾಂಗ್ರೆಸ್ ಸೇರಿ ಬಸವನ ಬಾಗೇವಾಡಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಇವರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾಗಿದ್ದರು.
ಆರ್. ಬಿ ತಿಮ್ಮಾಪುರ: ರಾಮಪ್ಪ ಬಾಳಪ್ಪ ತಿಮ್ಮಾಪುರ (ಆರ್.ಬಿ. ತಿಮ್ಮಾಪೂರ್) ಅವರು ಕರ್ನಾಟಕದಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದಾರೆ. 10 ಜೂನ್ 2016 ರಂದು ಅವರು ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. ಅವರು ಕಾಂಗ್ರೆಸ್ ಶಾಸಕರ 33 ಮತಗಳನ್ನು ಪಡೆದಿದ್ದರು. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಅವರು ಸಕ್ಕರೆ, ಬಂದರು ಮತ್ತು ಒಳನಾಡು ಸಾರಿಗೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು 2016 ರಿಂದ 2018 ರವರೆಗೆ ಅಬಕಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಹ ಆಗಿದ್ದ ತಿಮ್ಮಾಪೂರ್ 1989ರಲ್ಲಿ ವಿಧಾನಸಭಾ ಸದಸ್ಯರಾಗಿದ್ದರು.
ಎಸ್ ಎಸ್ ಮಲ್ಲಿಕಾರ್ಜುನ: ಶಾಮನೂರು ಮಲ್ಲಿಕಾರ್ಜುನ್ (ಎಸ್.ಎಸ್. ಮಲ್ಲಿಕಾರ್ಜುನ)ಅವರು ದಾವಣಗೆರೆ ಉತ್ತರ ಕ್ಷೇತ್ರದ ಶಾಸಕರಾಗಿದ್ದಾರೆ. ಇವರು ಹಾಲಿ ಶಾಸಕ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಪುತ್ರ. ಮಲ್ಲಿಕಾರ್ಜುನ್ ಬಿಕಾಂ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಕೈಗಾರಿಕೋದ್ಯಮಿ, ಸಕ್ಕರೆ ಕಾರ್ಖಾನೆ, ರೈಸ್ ಮಿಲ್ ಮಾಲೀಕರಾಗಿರುವ ಮಲ್ಲಿಕಾರ್ಜುನ್ ಎಸ್ ಎಸ್ ಮೆಡಿಕಲ್ ಕಾಲೇಜ್ ಚೇರಮನ್ ಆಗಿದ್ದಾರೆ.
1998ರಲ್ಲಿ ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದರು. ತಂದೆ ಶಾಮನೂರು ಶಿವಶಂಕರಪ್ಪ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆ ಉಪ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಳಿಕ 1999ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾಗಿ ಎಸ್ ಎಂ ಕೃಷ್ಣ ಸರ್ಕಾರದಲ್ಲಿ ಯುವ ಜನ ಸೇವೆ ಕ್ರೀಡಾ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಮೂರು ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
2013ರಲ್ಲಿ ಮೂರನೇ ಸಲ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ತೋಟಗಾರಿಕೆ ಹಾಗೂ ಸಕ್ಕರೆ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ 2018ರಲ್ಲಿ ಮಾಜಿ ಸಚಿವ ಎಸ್ ಎ ರವೀಂದ್ರನಾಥ ವಿರುದ್ಧ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ್ ಕೇವಲ ನಾಲ್ಕೂವರೆ ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಇದೀಗ 2023ರಲ್ಲಿ ವಿಧಾನಸಭೆಗೆ ನಾಲ್ಕನೇ ಬಾರಿ ಆಯ್ಕೆಯಾಗುವ ಮೂಲಕ ಮತ್ತೆ ಸಚಿವರಾಗಿದ್ದಾರೆ.
ಇದನ್ನೂ ಓದಿ:ಎಚ್.ಕೆ.ಪಾಟೀಲ್, ಕೃಷ್ಣಬೈರೇಗೌಡ ಸೇರಿ ಆರು ಮಂದಿ ನೂತನ ಸಚಿವರ ಪರಿಚಯ ಇಲ್ಲಿದೆ..!