ಬೆಂಗಳೂರು: ಆಂಧ್ರ ಪ್ರದೇಶ ಮತ್ತು ಕರ್ನಾಟಕ ನಡುವಿನ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ನಡುವೆ ಹೆಚ್ಚುವರಿ ಬಸ್ ಸಂಚಾರಕ್ಕಾಗಿ ಕೆಎಸ್‌ಆರ್‌ಟಿಸಿ ಮತ್ತು ಎಪಿಎಸ್‌ಆರ್‌ಟಿಸಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಒಪ್ಪಂದಕ್ಕೆ ಸಹಿ: ಈ ಎರಡು ರಾಜ್ಯಗಳ ಮಧ್ಯೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಹೆಚ್ಚುವರಿ ಸಾರಿಗೆ ಬಸ್ ಸಂಚಾರ ನಡೆಸಲು ಅನುವು ಮಾಡಿಕೊಡಲು ಉಭಯ ರಾಜ್ಯಗಳ ಸಾರಿಗೆ ನಿಗಮಗಳು ಒಪ್ಪಂದ ಮಾಡಿಕೊಂಡಿವೆ. ವಿಜಯವಾಡದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಹಾಗೂ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಹೆಚ್.ಡಿ ತಿರುಮಲ ರಾವ್ ಒಪ್ಪಂದಕ್ಕೆ ಸಹಿ ಹಾಕಿದರು.
ಇದನ್ನೂ ಓದಿ: 'ಮೋಟಾರು ವಾಹನ ಕಾಯ್ದೆ ಕಲಂ-74ರ ಅಡಿ ಒಪ್ಪಂದ ವಾಹನ ರಹದಾರಿಗೆ ಅಸ್ತು'
ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯಗಳ ನಡುವಿನ ಈ ಹಿಂದಿನ ಅಂತಾರಾಜ್ಯ ಸಾರಿಗೆ ಒಪ್ಪಂದ 2008ನೇ ಇಸವಿಯಲ್ಲಿ ಏರ್ಪಟ್ಟಿತ್ತು. ಎರಡೂ ರಾಜ್ಯಗಳ ನಡುವೆ ಪ್ರಯಾಣಿಸುವ ಸಾರ್ವಜನಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ಉಭಯ ರಾಜ್ಯಗಳ ರಸ್ತೆ ಸಾರಿಗೆ ನಿಗಮಗಳು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ತಿಳಿದು ಬಂದಿದೆ.
9ನೇ ಪೂರಕ ಅಂತಾರಾಜ್ಯ ಸಾರಿಗೆ ಒಪ್ಪಂದ: ಇದರ ಅನ್ವಯ ಕೆಎಸ್‌ಆರ್‌ಟಿಸಿ ಬಸ್‌ಗಳು 69,372 ಕಿ.ಮೀ. ಸಂಚರಿಸಲಿದ್ದು, ಎಪಿಎಸ್‌ಆರ್‌ಟಿಸಿ ಬಸ್‌ಗಳು 69,284 ಕಿ.ಮೀ. ಸಂಚರಿಸಲಿವೆ. ಕರ್ನಾಟಕ ಹಾಗೂ ಆಂಧ್ರಪ್ರದೇಶ ಸರ್ಕಾರಗಳು ಮಾಡಿಕೊಳ್ಳಬೇಕಾದ ಪ್ರಸ್ತಾಪಿತ 9ನೇ ಪೂರಕ ಅಂತಾರಾಜ್ಯ ಸಾರಿಗೆ ಒಪ್ಪಂದಕ್ಕೆ ರಾಜ್ಯ ಸಾರಿಗೆ ಸಂಸ್ಥೆಗಳ ಮಾರ್ಗಗಳನ್ನು ಅಂತಿಮಗೊಳಿಸಿ ಸಹಿ ಮಾಡಲಾಗಿದೆ.
ರಾಜ್ಯದ ವಿವಿಧೆಡೆ ಸೇವೆ ಪ್ರಾರಂಭ: ಆ ಮೂಲಕ 15 ವರ್ಷಗಳ ಬಳಿಕ ಕರ್ನಾಟಕ ಹಾಗೂ ಆಂಧ್ರಪ್ರದೇಶ ನಡುವೆ ಹೆಚ್ಚಿನ ಅಂತರ ರಾಜ್ಯ ಸಾರಿಗೆ ಸಂಚಾರಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಗಳು ಆಂಧ್ರಪ್ರದೇಶದ ಮತ್ತಷ್ಟು ಭಾಗಗಳಿಗೆ ಕರ್ನಾಟಕದಿಂದ ಸಂಚಾರ ಆರಂಭಿಸಲಿದ್ದಾವೆ. ಅದೇ ರೀತಿ ಆಂಧ್ರ ಬಸ್‌ಗಳು ರಾಜ್ಯದ ವಿವಿಧೆಡೆ ತನ್ನ ಸೇವೆ ಪ್ರಾರಂಭಿಸಲಿವೆ.
ಈವರೆಗೆ ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ನಡುವೆ ಒಂದು ಪ್ರಧಾನ ಅಂತರರಾಜ್ಯ ಸಾರಿಗೆ ಒಪ್ಪಂದ ಹಾಗೂ 8 ಪೂರಕ ಅಂತರರಾಜ್ಯ ಸಾರಿಗೆ ಒಪ್ಪಂದಗಳು ಏರ್ಪಟ್ಟಿರುತ್ತವೆ. ಇದೀಗ ಎರಡೂ ರಾಜ್ಯಗಳ ನಡುವೆ ಪ್ರಯಾಣಿಸುವ ಸಾರ್ವಜನಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಈ ಹಿನ್ನೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ಮತ್ತೊಂದು ಒಪ್ಪಂದ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಡ್ರೈವರ್ ಆಗಲು ಮ್ಯಾನೇಜರ್ ಹುದ್ದೆ ತೊರೆದ ಮಹಿಳೆ: ಸಾರಿಗೆ ಸಂಸ್ಥೆಯಲ್ಲಿ ಮಹಿಳಾ ಡ್ರೈವರ್ಗಳ ಯುಗಾರಂಭ