ಬೆಂಗಳೂರು: ಭಾರತ್ ನೆಟ್ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಸರ್ಕಾರಿ ಶಾಲೆಗಳಿಗೆ ಕೇಬಲ್ ಮೂಲಕ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಆಲೋಚಿಸಲಾಗುತ್ತಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಸಂಬಂಧಿಸಿದ ಇಲಾಖೆಯೊಂದಿಗೆ ಪ್ರಾಥಮಿಕ ಚರ್ಚೆ ನಡೆಸಲಾಗಿದ್ದು, ಮೊದಲ ಹಂತದಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಇದು ಮುಂದಿನ ಒಂದು ವರ್ಷದೊಳಗೆ ಸಾಕಾರವಾಗುವ ನಿರೀಕ್ಷೆ ಇದೆ ಎಂದಿದ್ದಾರೆ.
ಸರ್ಕಾರದ ಈ ಕ್ರಮವು ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಗೆ ಹೊಸ ದಿಶೆಯನ್ನು ಕಲ್ಪಿಸಲಿದೆ. ಕೋವಿಡ್ ಸೃಷ್ಟಿಸಿರುವ ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ತಂತ್ರಜ್ಞಾನಾಧಾರಿತ ಕಲಿಕೆಗೆ ವಿಶೇಷ ಒತ್ತು ನೀಡುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಇನ್ನು ಉಚ್ಚ ನ್ಯಾಯಾಲಯದ ಅಪೇಕ್ಷೆಯಂತೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಮಕ್ಕಳಿಗೆ ಬೇಳೆ ಕಾಳುಗಳನ್ನು ನೀಡುವ ಕಾರ್ಯಕ್ರಮ ಮುಂದುವರೆಯಲಿದ್ದು, ಕೋವಿಡ್ ಕಾರಣಕ್ಕೆ ಈ ಸಾಲಿನಲ್ಲಿ ಶಾಲಾವರಣದಲ್ಲಿ ಆಹಾರವನ್ನು ತಯಾರಿಸುವ ಕಾರ್ಯಕ್ರಮ ಇರುವುದಿಲ್ಲ ಅಂತ ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.
ವೈಜ್ಞಾನಿಕ ಪಠ್ಯ ಸಂಯೋಜನೆಯ ಕ್ರಮ
ಜನವರಿ 1ರಿಂದ ವಿದ್ಯಾಗಮ ಕಾರ್ಯಕ್ರಮವನ್ನು ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಪುನರಾರಂಭಿಸಲಾಗುತ್ತದೆ. ಒಂದರಿಂದ ಒಂಬತ್ತರ ತರಗತಿಗಳ ಮಕ್ಕಳಿಗೆ ಕನಿಷ್ಠ ಕಲಿಕೆಯ ಅವಶ್ಯಕತೆಗಳು, ಲಭ್ಯವಾಗುವ ಸಮಯಗಳನ್ನು ಗಮನದಲ್ಲಿಟ್ಟುಕೊಂಡು ಅವಶ್ಯಕ ಬೋಧನೆಯನ್ನು ಶಾಲಾ ಶಿಕ್ಷಕರು ತಮ್ಮ ಹಂತದಲ್ಲಿ ನಿರ್ಧರಿಸಿ ನಿರ್ವಹಿಸಬೇಕಾದ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯ ಕುರಿತಂತೆ ವೈಜ್ಞಾನಿಕ ಪಠ್ಯ ಸಂಯೋಜನೆಯ ಕ್ರಮಕ್ಕೆ ಸಹ ಆಲೋಚಿಸಲಾಗಿದೆ ಎಂದು ಹೇಳಿದರು.
ಓದಿ: ರಾಜ್ಯದಲ್ಲಿಂದು 958 ಕೊರೊನಾ ಕೇಸ್ ಪತ್ತೆ: 9 ಮಂದಿ ಬಲಿ
ಈ ವರ್ಷ ಶಾಲಾರಂಭದ ಬಳಿಕ ಶಾಲೆಗೆ ಹಾಜರಾಗುವುದು ಅಥವಾ ಆನ್ಲೈನ್ /ಪರ್ಯಾಯ ಮಾದರಿಯ ಶಿಕ್ಷಣವನ್ನು ಪಡೆಯುವುದು ವಿದ್ಯಾರ್ಥಿ/ಪೋಷಕರಿಗೆ ಬಿಟ್ಟಿದ್ದೆಂದು ಮಾರ್ಗದರ್ಶಕ ಶಿಕ್ಷಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಮ್ಮ ಕಲಿಕೆಯನ್ನು ಮುಂದುವರೆಸಲಿದ್ದಾರೆ. ಪ್ರತಿ ಶಿಕ್ಷಕರೂ ಮುಂಚಿತವಾಗಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಂಡು ಶಾಲೆಗೆ ಹಾಜರಾಗಬೇಕು. ಕೋವಿಡ್ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರನ್ನು ಆ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ಶಾಲಾ ಹಾಜರಾತಿ ಕಡ್ಡಾಯವಲ್ಲವಾದರೂ ಯಾವುದೇ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಇಚ್ಛಿಸಿದಲ್ಲಿ ಅಲ್ಲಿ ಸುರಕ್ಷಿತ ವಾತಾವರಣದ ಭರವಸೆ ಇಡಬಹುದು ಎಂದು ಹೇಳಿದರು.
ಖಾಸಗಿ ಶಾಲೆಗಳು ಪೋಷಕರ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕು. ಅವರ ಹಂತದಲ್ಲಿ ಕಡ್ಡಾಯವಾಗಿ ಪೋಷಕರ ಸಭೆ ನಡೆಸಿ ಶುಲ್ಕ ಪರಿಮಾಣವನ್ನು ನಿರ್ಧರಿಸುವ ಕ್ರಮಕ್ಕೆ ಮುಂದಾಗಬೇಕೆಂದು ಅವರು ತಾವು ಕಳೆದ ಬಾರಿ ಖಾಸಗಿ ಶಾಲಾ ಸಂಘಟನೆಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಈ ಕುರಿತಂತೆ ವಿಸ್ತೃತ ಚರ್ಚೆ ನಡೆಸಿ ತಿಳಿಸಲು ನಿರ್ದೇಶನ ನೀಡಿದ್ದು, ಖಚಿತವಾದ ವರದಿ ಸ್ವೀಕೃತವಾದ ಬಳಿಕ ಸರ್ಕಾರ ಮುಂದಿನ ಕ್ರಮವನ್ನು ನಿರ್ಣಯಿಸಲಿದೆ ಎಂದು ಹೇಳಿದರು.