ಬೆಂಗಳೂರು: ವಿಧಾನಪರಿಷತ್ ಕಲಾಪದಲ್ಲಿ ಇಂದು ಹೊಸ ಸರ್ಕಾರದ ಹನಿಮೂನ್ ಪೀರಿಯಡ್, ಮ್ಯಾರೇಜ್ ರಿನಿವಲ್ ಮತ್ತು ಎಕ್ಸ್ಪೆರಿಡೇಟ್ ವಿಷಯದ ಕುರಿತು ಸ್ವಾರಸ್ಯಕರ ಚರ್ಚೆ ಆಯಿತು. ಅನ್ನ ಸ್ಪೆಷಲಿಸ್ಟ್, ಚಿನ್ನ ಸ್ಪೆಷಲಿಸ್ಟ್ ಪ್ರಸ್ತಾಪಿಸಿದ ಸಚಿವ ಪ್ರಿಯಾಂಕ್ ಖರ್ಗೆ ವಿಷಾದ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ವಿಧಾನಪರಿಷತ್ನಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲಿನ ಮುಂದುವರೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಜೆಡಿಎಸ್ ಸದಸ್ಯ ಟಿ ಎ ಶರವಣ, ಭ್ರಷ್ಟಾಚಾರದ ಗಂಗೋತ್ರಿ ಈಗ ಶುರುವಾಗಿದೆಯಾ? ಎಂದು ಸರ್ಕಾರವನ್ನು ಆರಂಭಿಕ ಶಬ್ಧದಿಂದಲೇ ತರಾಟೆ ತೆಗೆದುಕೊಂಡರು. ಆಗ ಸರ್ಕಾರ ಹನಿಮೂನ್ ಪೀರಿಯಡ್ನಲ್ಲಿದೆ ಎನ್ನುವ ಮಾತುಗಳು ತೇಲಿಬಂದವು. ಇದಕ್ಕೆ ಕುಟುಕಿದ ಶರವಣ, ಎಷ್ಟು ತಿಂಗಳು ಹನಿಮೂನ್ ಪೀರಿಯಡ್ ಬೇಕು? ಎಂದು ಪ್ರಶ್ನಿಸಿದರು. ಆಗ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್ ಆರು ತಿಂಗಳಾದರೂ ಬೇಡವಾ? ಅವಕಾಶ ಕೊಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೆ ಟಕ್ಕರ್ ನೀಡಿದ ಬಿಜೆಪಿ ಸದಸ್ಯ ಡಿ.ಎಸ್ ಅರುಣ್, 65 ವರ್ಷದಿಂದ ರಿನಿವಲ್ ಆಗುತ್ತಿದೆ. ಹಾಗಾಗಿ ಹನಿಮೂನ್ ಪೀರಿಯಡ್ ನೀಡುವುದು ಬೇಡ ಎಂದರು. ಇದಕ್ಕೆ ಶರವಣ ಕೂಡ ಸಹಮತ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಸಂಸಾರ ಚೆನ್ನಾಗಿದೆ ಎಂದು ರಿನಿವಲ್ ಆಗುತ್ತಿದೆ ಎಂದರು. ಇದಕ್ಕೆ ಟಾಂಗ್ ನೀಡಿದ ಶರವಣ ರಿನಿವಲ್ ಆಗುತ್ತಿರಬಹುದು. ಆದರೆ, ಆದಷ್ಟು ಬೇಗ ಎಕ್ಸ್ಪೆರಿಡೇಟ್ ಬರಲಿದೆ ಎಂದು ಹೇಳಿದರು. ಇದರಿಂದಾಗಿ ಸದನದಲ್ಲಿ ಕೆಲಕಾಲ ಹಾಸ್ಯದ ಹೊನಲು ಹರಿಯಿತು.
ಕ್ಷಮೆ ಕೇಳಿದ ಪ್ರಿಯಾಂಕ್ ಖರ್ಗೆ: ಬದಲಾವಣೆ ಜಗತ್ತಿನ ನಿಯಮ, ಜನ ಬದಲಾವಣೆ ಕೇಳುತ್ತಾರೆ, ಬದಲಾಯಿಸುವ ಶಕ್ತಿ ಜನರಿಗಿದೆ. ಅದರಂತೆ ಬಹುಮತ ಪಡೆದು ಬಂದಿದ್ದೀರಿ, ನುಡಿದಂತೆ ನಡೆದುಕೊಳ್ಳಬೇಕು, 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿರಿ. ಆಗ ಕೇಂದ್ರದ 5 ಕೆಜಿ ಪ್ರಸ್ತಾಪ ಮಾಡಿಯೇ ಇಲ್ಲ, 10+5 ಕೆಜಿ ಸೇರಿ 15 ಕೆಜಿ ಎಂದಿದ್ದೀರಿ ಅದರಂತೆ ಕೊಡಬೇಕಲ್ಲವೇ ಎಂದು ಶರವಣ ಆಗ್ರಹಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು 5 ಕೆಜಿ ಸೇರಿ ಒಟ್ಟು 10 ಕೆಜಿ ಎಂದಿದ್ದು, ಪ್ರಣಾಳಿಕೆ ನೋಡಿ ಎಂದರು. ಮಾತು ಮುಂದುವರೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ ಅನ್ನ ಸ್ಪೆಷಲಿಸ್ಟ್, ಶರವಣ ಚಿನ್ನ ಸ್ಪೆಷಲಿಸ್ಟ್. ನಾವು ನುಡಿದಂತೆ ಹಸಿದವರಿಗೆ ಅನ್ನ ಕೊಡಲಿದ್ದೇವೆ ಎಂದರು.
ಚಿನ್ನ ಸ್ಪೆಷಲಿಸ್ಟ್ ಪದ ಬಳಕೆಗೆ ಅಸಮಾಧಾನ ವ್ಯಕ್ತಪಡಿಸಿದ ಶರವಣ, ಸಚಿವರು ನನ್ನ ಹೊಟ್ಟೆಪಾಡಿನ ಬಗ್ಗೆ ಮಾತನಾಡಬಾರದು. ನಾವೆಲ್ಲ ಜನರ ಕೆಲಸ ಮಾಡಲು ಬಂದಿರುವವರು ಎಂದು ತಿರುಗೇಟು ನೀಡಿದರು. ಈ ವೇಳೆ ಹಠಕ್ಕೆ ಬೀಳದ ಪ್ರಿಯಾಂಕ್ ಖರ್ಗೆ ಶರವಣ ಅವರಿಗೆ ನನ್ನ ಮಾತಿನಿಂದ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಚಿನ್ನ ಸ್ಪೆಷಲಿಸ್ಟ್ ವಿವಾದಕ್ಕೆ ತೆರೆ ಎಳೆದರು.
ನಂತರ ಮಾತು ಮುಂದುವರೆಸಿದ ಶರವಣ, ದೇವೇಗೌಡರು ಸಿಎಂ ಆದಾಗ ಮೊದಲ ಬಜೆಟ್ ಮಂಡಿಸಿದ್ದು ಯಾರು? ಸಿದ್ದರಾಮಯ್ಯ ಅಲ್ಲವೇ? 14 ಬಾರಿ ಬಜೆಟ್ ಮಂಡಿಸಿ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ. ಆದರೆ ಅನ್ನಭಾಗ್ಯದ ಇತಿಹಾಸ ತಿಳಿದುಕೊಳ್ಳಲಿ. ದೇವೇಗೌಡ ಪ್ರಧಾನಿ ಆದಾಗ ಸಿದ್ದರಾಮಯ್ಯಗೆ ಅನ್ನಭಾಗ್ಯ ಮಾಡಲು ಹೇಳಿದ್ದು, ಹಣ ನಾವು ಕೊಡುತ್ತೇವೆ ಯೋಜನೆ ಮಾಡಿ ಎಂದಿದ್ದರು. ಅಂದು ಆರಂಭವಾಗಿದ್ದು ಈಗಲೂ ಮುಂದುವರೆಯುತ್ತಿದೆ. ಇದನ್ನು ನೆನಪಿಟ್ಟುಕೊಳ್ಳಬೇಕು ಎಂದು ಕಾಂಗ್ರೆಸ್ಗೆ ಟಕ್ಕರ್ ನೀಡಿದರು.
ಹಣದ ಬದಲು ಬೇಳೆ ಇತ್ಯಾದಿ ಕೊಡಿ: ಅಧಿಕಾರಕ್ಕೆ ಬರಲು ಜನರ ಮೂಗಿಗಲ್ಲ ನೆತ್ತಿಗೆ ತುಪ್ಪ ಸವರಿದ್ದೀರಿ. ಒಂದು ಕೆಜಿ ಅಕ್ಕಿಗೆ 34 ರೂ. ಕೊಡುತ್ತೇವೆ ಎಂದಿದ್ದೀರಾ. ಅಷ್ಟು ಹಣಕ್ಕೆ ಅಕ್ಕಿ ಸಿಗುತ್ತಾ? ದುಡ್ಡು ತಿನ್ನಲು ಆಗುತ್ತಾ? ಅಕ್ಕಿಯೂ ಬರಲ್ಲ, ದುಡ್ಡು ತಿನ್ನೋಕು ಬರಲ್ಲ. ಹಸಿದವರಿಗೆ ಅನ್ನ ಕೊಡುತ್ತೇವೆ ಎಂದಿದ್ದೀರಿ, ಒಳ್ಳೆಯ ಕೆಲಸ ಮಾಡಿ. 6 ವರ್ಷದಿಂದ ನಾನು ಅಪ್ಪಾಜಿ ಕ್ಯಾಂಟೀನ್ ನಡೆಸುತ್ತಿದ್ದೇನೆ. ಕಷ್ಟ ಏನು ಎಂದು ಗೊತ್ತಿದೆ. ಇಂದಿರಾ ಕ್ಯಾಂಟೀನ್ ಮುಂದುವರೆಸಿಕೊಂಡು ಹೋಗಿ ನಮ್ಮ ತಕರಾರಿಲ್ಲ. ಆದರೆ 34 ರೂ. ಕೊಡುತ್ತೀರಾ ಅದು ಎಲ್ಲಿಗೆ ಹೋಗಲಿದೆ ಗೊತ್ತಾ? ಹಣದ ಬದಲಾಗಿ ಬೇಳೆ, ಎಣ್ಣೆ, ಸಕ್ಕರೆ, ಸಿರಿಧಾನ್ಯ ಇತ್ಯಾದಿ ಯಾವುದಾದರೂ ಕೊಡುವ ಯೋಚನೆ ಮಾಡಿ, ಹಣ ಉಪಯೋಗವಾಗಲ್ಲ ಎಂದು ಸಲಹೆ ನೀಡಿದರು.
ಗೃಹ ಲಕ್ಷ್ಮಿ ಯೋಜನೆಗೆ ಗ್ರಹಣ ಎಂದ ಶರವಣ: ಗೃಹ ಜ್ಯೋತಿ ಯೋಜನೆಯಲ್ಲಿ 200 ಯೂನಿಟ್ವರೆಗೆ ಉಚಿತ ಎಂದಿದ್ದರು. ಆದರೆ ವಿದ್ಯುತ್ ಬಿಲ್ ನೋಡಿದರೆ ಹೊಟ್ಟೆ ಉರಿಯಲಿದೆ. ಆಗ ಎಲ್ಲರಿಗೂ ಫ್ರೀ ವಿದ್ಯುತ್ ಎಂದು ಹೇಳಿ ಈಗ ಒಂದು ವರ್ಷದ ಲೆಕ್ಕಹಾಕಿ ವಿಭಾಗಿಸಿ ಸರಾಸರಿ ಮಾಡಿ ಶೇಕಡಾ 10ರಷ್ಟು ಹೆಚ್ಚು ನಿಗದಿ ಮಾಡುತ್ತಿದ್ದೀರಿ. ಹೇಳಿದ್ದೊಂದು ಮಾಡುತ್ತಿರುವುದು ಇನ್ನೊಂದು , ಇದು ಮೋಸವಲ್ಲವೇ? ಗೃಹ ಲಕ್ಷ್ಮಿ ಯೋಜನೆಗೆ ಗ್ರಹಣ ಬಡಿದಿದೆ. ಸರ್ವರ್ ಅನ್ನು ಕೇಂದ್ರ ಹ್ಯಾಕ್ ಮಾಡಿದೆ ಎಂದು ಬೆಳಗಾವಿಯಲ್ಲಿ ಸಚಿವರೊಬ್ಬರು ಹೇಳುತ್ತಾರೆ. ಸರ್ಕಾರ ಬಂದು 24 ಗಂಟೆಯಲ್ಲಿ ಯೋಜನೆ ಎಂದು ಹೇಳಿ ಎರಡು ತಿಂಗಳಾದರೂ ಅರ್ಜಿಯನ್ನೇ ತೆಗೆದುಕೊಂಡಿಲ್ಲ. ಜೂನ್ ತಿಂಗಳಿನಿಂದಲೇ ಅನ್ವಯವಾಗುವಂತೆ ಹಣ ನೀಡಬೇಕು ಎಂದು ಶರವಣ ಒತ್ತಾಯಿಸಿದರು.
ಶಕ್ತಿ ಯೋಜನೆ ಬಗ್ಗೆ ಶರವಣ ಟೀಕೆ: ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ನನ್ನ ಸಹಮತವಿದೆ. ಆದರೆ, ಬಸ್ ನಿರ್ವಾಹಕರು ಹೆಣ್ಣುಮಕ್ಕಳ ಉಚಿತ ಟಿಕೆಟ್ನ್ನೇ ಪುರುಷರಿಗೂ ಕೊಡುತ್ತಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಇದನ್ನು ಸರಿಪಡಿಸಿಕೊಳ್ಳಿ. ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಹಾಗೂ ಖಾಸಗಿ ಬಸ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಸೋಲ ಮಾಡಿಕೊಂಡು ವಾಹನ ತಂದಿದ್ದಾರೆ, ಅವರೆಲ್ಲಿ ಹೋಗಬೇಕು? ಅವರಿಗೆ ಏನು ಮಾಡಿದ್ದೀರಿ. ತಮಿಳುನಾಡಿನಲ್ಲಿ ಚುನಾವಣೆ ಭರವಸೆಯಂತೆ ಮಹಿಳೆಯರ ಉಚಿತ ಪ್ರಯಾಣಕ್ಕೆ ಪಿಂಕ್ ಬಸ್ ಕೊಟ್ಟರು. ಈಗ ಎರಡು ವರ್ಷವಾದ ನಂತರ ಜಿಲ್ಲೆಯಿಂದ ಜಿಲ್ಲೆಗೆ ಸೀಮಿತ ಮಾಡಿದ್ದಾರೆ. ಅದು ಇಲ್ಲಿಯೂ ಆಗಬಾರದು, 5 ವರ್ಷ ಪೂರ್ತಿ ಕೊಡಬೇಕು ಎಂದು ಶರವಣ ಹೇಳಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್, ಐದು ವರ್ಷ ಅಲ್ಲ 10 ವರ್ಷ ಕೊಡುತ್ತೇವೆ ಬಿಡಿ ಎಂದರು. ಇದಕ್ಕೆ ಟಾಂಗ್ ನೀಡಿದ ಶರವಣ, ಜನ ಬಹುಮತ ಕೊಟ್ಟರೆ 100 ವರ್ಷ ಗೂಟ ಹೊಡೆದುಕೊಂಡಿರಿ ಎಂದರು.
ಇದನ್ನು ಓದಿ: ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಲವ್ ಜಿಹಾದ್, ಪಾಕಿಸ್ತಾನ ಜಿಂದಾಬಾದ್ ಫ್ರೀ: ಆರ್.ಅಶೋಕ್