ಬೆಂಗಳೂರು : ಆತ ದಕ್ಷಿಣ ಭಾರತದ ಪ್ರಮುಖ ನಗರಗಳನ್ನೇ ಟಾರ್ಗೆಟ್ ಮಾಡಿದ್ದ ಕುಖ್ಯಾತ ಕಾರುಗಳ್ಳ. ಮೂರು ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದ್ದ ಆ ಕಳ್ಳನ ಪತ್ನಿ ಹೈಕೋರ್ಟ್ ಅಡ್ವೋಕೇಟ್, ಮಗ ಸ್ಟೇಟ್ ಲೆವಲ್ ಹಾಕಿ ಪ್ಲೇಯರ್. ಅಷ್ಟೇ ಅಲ್ಲ, ಪೊಲೀಸರಿಗೆ ಫೋನ್ ಮಾಡಿ ಕಾರು ಕದಿಯುತ್ತಿದ್ದ ಆ ನಟೋರಿಯಸ್ ಕಳ್ಳ ಕೊನೆಗೂ ಹುಳಿಮಾವು ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರಿನ ಹುಳಿಮಾವು ಪೊಲೀಸರು ಕುಖ್ಯಾತ ಕಾರುಗಳ್ಳ ತಮಿಳುನಾಡು ಮೂಲದ ಪರಮೇಶ್ವರನ್ ಹಾಗೂ ಆತನ ಶಿಷ್ಯ ಸದ್ದಾಂಹುಸೇನ್ ಎಂಬುವರನ್ನು ಖೆಡ್ಡಾಗೆ ಕೆಡವಿದ್ದಾರೆ. ಬಂಧಿತರಿಂದ 1.70 ಕೋಟಿ ಮೌಲ್ಯದ 10 ಕ್ಕೂ ಹೆಚ್ಚು ವಿವಿಧ ಕಂಪನಿಗಳ ಐಶಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದಾರೆ.
ಈ ಹಿಂದೆ ಮಡಿವಾಳ ಬಳಿ ಪಿಜಿ ಬಾತ್ ರೂಂಗೆ ಕ್ಯಾಮರಾ ಇಟ್ಟು ಸಿಕ್ಕಿಬಿದ್ದಿದ್ದ. ಬಳಿಕ ಚೆನ್ನೈ ಪೊಲೀಸರ ಬಲೆಗೆ ಬಿದ್ದಿದ್ದ ಪರಮೇಶ್ವರನ್ ಒಟ್ಟು 25 ಸ್ಕಾರ್ಪಿಯೋ ಕಾರುಗಳನ್ನು ಕದ್ದು ಸ್ಕಾರ್ಪಿಯೋ ಪರಮೇಶ್ವರನ್ ಅನ್ನೋ ಕುಖ್ಯಾತಿಯನ್ನು ಪಡೆದಿದ್ದಾನೆ. ಅಷ್ಟೇ ಅಲ್ಲ, ತಮಿಳುನಾಡು ಪೊಲೀಸರಿಗೆ ಕರೆ ಮಾಡಿ ನಾನು ಕಾರು ಕದಿಯುತ್ತಿದ್ದೀನಿ, ತಾಕತ್ತಿದ್ದರೇ ಹಿಡಿರಿ ಅಂತಾ ಸವಾಲು ಹಾಕಿ ಕಳ್ಳತನ ಮಾಡಿದ್ದನಂತೆ.
ಕಳ್ಳ ಪರಮೇಶ್ವರನ್ ಜಸ್ಟ್ 15 ನಿಮಿಷಗಳಲ್ಲಿ ಸಾಫ್ಟ್‌ವೇರ್ ಚೇಂಜ್ ಮಾಡಿ ನೂರಾರು ಕಾರುಗಳನ್ನು ಕದ್ದಿದ್ದಾನೆ. ಆತ ಈವರೆಗೆ 124 ಕಾರು ಕದ್ದಿದ್ದು, ಕೇವಲ 62 ಕಾರುಗಳನ್ನು ಮಾತ್ರ ಕದ್ದಿರೋದಾಗಿ ಬಾಯ್ಬಿಟ್ಟಿದ್ದಾನೆ. ಸದ್ಯ ಹುಳಿಮಾವು ಪೊಲೀಸರು 17 ಕೇಸುಗಳಲ್ಲಿ ಬೇಕಾಗಿರುವ ನಟೋರಿಯಸ್ ಕಳ್ಳ ಪರಮೇಶ್ವರ್‌ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.