ಬೆಂಗಳೂರು: ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆ ಕಂದಾಯ ಭವನ ಸೇರಿದಂತೆ ನಗರದ ನಾಲ್ಕು ತಾಲೂಕು ಕಚೇರಿಗಳಿಗೆ ಉಪಲೋಕಾಯುಕ್ತ ನೇತೃತ್ವದ ಪೊಲೀಸರ ತಂಡ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದೆ. ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿ, ಯಲಹಂಕ, ಕೆ ಆರ್.ಪುರಂ ಹಾಗೂ ಅನೇಕಲ್ ತಾಲೂಕು ಕಚೇರಿಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಂದಾಯ ಭವನಕ್ಕೆ ದಿಢೀರ್ ಭೇಟಿ ನೀಡಿದ ಡೆಪ್ಯುಟಿ ರಿಜಿಸ್ಟ್ರಾರ್ ಇಬ್ರಾಹಿಂ ಮತ್ತು ಅಡಿಷನಲ್ ರಿಜಿಸ್ಟ್ರಾರ್ ಸುದೇಶ್ ಪರದೇಶಿ ನೇತೃತ್ವದ ತಂಡ ಪರಿಶೀಲನೆ ನಡೆಸಿ, ತೆರಳಿದೆ.
ಸರ್ಕಾರದ ವಿವಿಧ ಯೋಜನೆ ಪಡೆಯಲು ಸಾರ್ವಜನಿಕರಿಂದ ಬರುವ ಅರ್ಜಿ ವಿಳಂಬ, ಜಾತಿ - ಆದಾಯ ಪ್ರಮಾಣ ಪತ್ರ ಪಡೆಯಲು ಹಣ ತೆಗೆದುಕೊಳ್ಳುವುದು, ಕರ್ತವ್ಯ ಅವಧಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಗುರುತಿನ ಚೀಟಿ ಹಾಕದಿರುವುದು, ಹಾಜರಿ ಪುಸ್ತಕ ನಿರ್ವಹಣೆ, ಅರ್ಜಿಗಳನ್ನು ಸಕಾಲಕ್ಕೆ ವಿಲೇವಾರಿ ಮಾಡದಿರುವುದು ಸೇರಿದಂತೆ ವಿವಿಧ ದೂರುಗಳು ಬಂದ ಹಿನ್ನೆಲೆ ತಾಲೂಕು ಕಚೇರಿಗಳಲ್ಲಿ ಉಪಲೋಕಾಯುಕ್ತ ಹಾಗೂ ಪೊಲೀಸರ ತಂಡ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ: ಹಾಸ್ಟೆಲ್ಗೆ ದಿಢೀರ್ ಭೇಟಿ ಕೊಟ್ಟು ತಿಳಿಸಾರು ಮಜ್ಜಿಗೆ ಕುಡಿದ ಉಪ ಲೋಕಾಯುಕ್ತರು