ಬೆಂಗಳೂರು: ಕಲ್ಯಾಣ ಕರ್ನಾಟಕದ ಜನರಿಗೆ ಮಾಡುತ್ತಿರುವ ಅನ್ಯಾಯವನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದ್ದನ್ನೇ ಸಾಧನೆ ಎಂದು ಬಿಜೆಪಿಯವರು ಓಡಾಡುತ್ತಿದ್ದಾರೆ. ಆದರೆ, 371[ಜೆ] ಯಡಿ ಈ ಜಿಲ್ಲೆಗಳನ್ನು ಯಾಕೆ ತರಲಾಗಿದೆ, ಅತ್ಯಂತ ಹಿಂದುಳಿದ ಈ ಜಿಲ್ಲೆಗಳಿಗೆ ವಿಶೇಷ ಪ್ರಾತಿನಿಧ್ಯ ನೀಡಲು ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್ ಮುಂತಾದ ಹಿರಿಯ ನಾಯಕರುಗಳು ಮತ್ತು ಈ ಭಾಗದ ಜನರು ಎಂತಹ ಹೋರಾಟ ನಡೆಸಿದ್ದರು ಎಂಬುದರ ತಿಳುವಳಿಕೆಯೇ ಇಲ್ಲದಂತೆ ಸರ್ಕಾರ ವರ್ತಿಸುತ್ತಿದೆ ಎಂದು ಹರಿಹಾಯ್ದಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಸುಮಾರು 36,000 ಕ್ಕೂ ಹೆಚ್ಚಿನ ತರುಣ ತರುಣಿಯರಿಗೆ ಉದ್ಯೋಗ ನೀಡಿದ್ದೆವು. ವಿಶೇಷ ಪ್ರಾತಿನಿಧ್ಯ ನೀಡಿ ಮೂಲಭೂತ ಸೌಲಭ್ಯ ಒದಗಿಸಿದ್ದೆವು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷವಾಯಿತು. ಆದರೆ, ಇದುವರೆಗೆ ಒಂದೇ ಒಂದು ಉದ್ಯೋಗವನ್ನೂ ಯುವಜನರಿಗೆ ನೀಡಿಲ್ಲ. ಮುಖ್ಯಮಂತ್ರಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆಯೇ ಹೊರತು ಕಾಮಗಾರಿಗಳು ಅನುಷ್ಠಾನವಾಗಿ ಜನರ ಬಳಕೆಗೆ ದೊರೆತಿದ್ದು ನಾನು ಕಾಣೆ ಎಂದಿದ್ದಾರೆ.
ಸರ್ಕಾರದ ಅರಾಜಕ ಆಡಳಿತ ಹಾಗೂ ತೀವ್ರಗೊಂಡ ಭ್ರಷ್ಠಾಚಾರದ ಕಾರಣದಿಂದ ಕಾಮಗಾರಿಗಳು ಅನುಷ್ಠಾನವಾಗದೆ ಹಾಗೆ ಉಳಿದಿವೆ. ಬಹಳಷ್ಟು ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನೇ ನೀಡಿಲ್ಲವೆಂಬ ದಾಖಲೆ ನನ್ನ ಬಳಿ ಇದೆ. 2019 ರ 11 ಕಾಮಗಾರಿಗಳಿಗೆ, 2020 ರ 102 ಕಾಮಗಾರಿಗಳಿಗೆ, 2021 ರ 164 ಕಾಮಗಾರಿಗಳಿಗೆ ಒಟ್ಟು 277 ಕಾಮಗಾರಿಗಳಿಗೆ ಇದುವರೆಗೆ ಅಧಿಕಾರಿಗಳು ಆಡಳಿತಾತ್ಮಕ ಅನುಮೋದನೆ ನೀಡಿಲ್ಲ ಎಂದು ಉಲ್ಲೇಖಿಸಿದ್ದಾರೆ.
ರಾಜ್ಯದಲ್ಲಿಯೆ ಅತ್ಯಂತ ಹಿಂದುಳಿದ ಈ ಜಿಲ್ಲೆಗಳ ಮಕ್ಕಳು, ಜನರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಲಸೆ ಸಮಸ್ಯೆ ಇನ್ನೂ ನಿಂತಿಲ್ಲ. ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ವಹಿಸಿಲ್ಲ. ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಯಾವ ಉದ್ದೇಶದಿಂದ ಸಂವಿಧಾನದ 371[ಜೆ] ಅನುಷ್ಠಾನ ಮಾಡಿತ್ತೊ ಅದರ ಮೂಲ ಆಶಯವನ್ನು ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಹಾಳುಗೆಡವಲು ಹೊರಟಿದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ಒಂದು ಮನೆಯನ್ನೂ ನೀಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ನೀಡಿದ್ದ ಮನೆ ನಿರ್ಮಾಣದ ಆದೇಶಗಳನ್ನು ರದ್ದು ಮಾಡಿದರು. ಆದರೆ ಈಗ ಮನೆ ಮನೆಯ ಬಾವುಟ ಹಾರಿಸಿ ಎಂದು ಹೇಳತೊಡಗಿದ್ದಾರೆ. ಮನೆಗಳೇ ಇಲ್ಲದ ಜನರು ಎಲ್ಲಿಂದ ಧ್ವಜ ಹಾರಿಸಬೇಕು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹರ್ ಘರ್ ತಿರಂಗ ಅಭಿಯಾನದ ಬಗ್ಗೆ ಹಗುರ ಮಾತು ಸರಿಯಲ್ಲ: ಸಿಎಂ ಬೊಮ್ಮಾಯಿ