ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಹಿನ್ನೆಲೆ ಹಲವೆಡೆ ಪ್ರತಿಭಟನೆ, ಬಸ್ಸುಗಳಿಗೆ ಕಲ್ಲು ತೂರಾಟ ಮಾಡಲಾಗುತ್ತಿದೆ. ಈ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಡಾಲರ್ಸ್ ಕಾಲೋನಿಯ ಸಿಎಂ ನಿವಾಸದ ಬಳಿ ಗೃಹ ಸಚಿವ ಬಸವರಾಜ್ ಬೊಮ್ಮಯಿ ಪ್ರತಿಕ್ರಿಯಿಸಿ ಡಿ .ಕೆ ಶಿವಕುಮಾರ್ ಅವರನ್ನು ಇ.ಡಿ. ಇಲಾಖೆ ಬಂಧಿಸಿದ ಬಳಿಕ, ರಾಜ್ಯದಲ್ಲಿ ಪ್ರತಿಭಟನೆ ಹಾಗೂ ಟೈರ್ಗೆ ಬೆಂಕಿ ಹಚ್ಚುವಂಥದ್ದು ಆಗಿದೆ. ಡಿಕೆಶಿ ಅವರ ಬಂಧನದ ನಂತರ ರಾಜ್ಯಾದ್ಯಂತ ಪ್ರತಿಭಟನೆ ನಡೀತಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕಾಂಗ್ರೆಸ್ ನವ್ರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಬಂದ್ಗೆ ಕರೆ ಕೊಟ್ಟಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಹೊಣೆಯಾಗಿದೆ. ಪ್ರತಿಭಟನಾಕಾರರು ಸಾರ್ವಜನಿಕರಿಗೆ, ಶಾಲೆಗೆ ಹೋಗುವ ಮಕ್ಕಳಿಗೆ, ಹೆಣ್ಣುಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಪ್ರತಿಭಟನೆ ನಡೆಸಬೇಕು ಎಂದಿದ್ದಾರೆ. ಕೆಲ ಹೊತ್ತಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆಯನ್ನ ನಡೆಸಿ ಪರಿಸ್ಥಿತಿಯನ್ನು ನಿಭಾಯಿಸುವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದರು. ಈಗಾಗಲೇ ಪ್ರತಿಭಟನಾಕಾರರು ಎರಡು ಬಸ್ಗಳಿಗೆ ಬೆಂಕಿ ಹಾಕಿ, ಐದಾರು ಬಸ್ಗಳಿಗೆ ಕಲ್ಲು ತೂರಾಟ ಮಾಡಿದ್ದಾರೆಂದು ಹೇಳಿದ್ದಾರೆ.