ಬೆಂಗಳೂರು: ಕಳೆದ ಮೂರು ವರ್ಷದಲ್ಲಿ 15 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ವಿವಿಧ ಕಾರಣದಿಂದ ಮುಚ್ಚಿವೆ. ಇದರಿಂದ 2086 ಜನ ನಿರುದ್ಯೋಗಿಗಳು ಆಗಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿವಿಧ ಕಾರಣಗಳಿಂದಾಗಿ ಈ ಕಾರ್ಖಾನೆಗಳು ಮುಚ್ಚಿವೆ. ಆದರೆ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ. ಈಸ್ ಆಫ್ ಡೂಯಿಂಗ್ ನಲ್ಲಿಯೂ ಮುಂಚೂಣಿಯಲ್ಲಿದ್ದೇವೆ. ರೋಗಗ್ರಸ್ತವಾಗಿರುವ ಕೈಗಾರಿಕೆ ಜೊತೆ ಮಾತುಕತೆ ಮಾಡುತ್ತಿದ್ದೇವೆ. ಅವುಗಳಿಗೆ ಉತ್ತೇಜನ ನೀಡಲಿದ್ದೇವೆ. ಸಾಕಷ್ಟು ಕಾರ್ಖಾನೆಗಳನ್ನು ಪುನಶ್ಚೇತನ ಮಾಡಲಾಗಿದೆ. ಮುಚ್ಚಿರುವ ಕಾರ್ಖಾನೆಗಳಿಗೆ ಸೇಲ್ ಡೀಡ್ ಮಾಡಿಕೊಡಲಾಗಿದೆ ಎಂದು ವಿವರ ನೀಡಿದರು.
ಕೈಗಾರಿಕೆ ಸ್ಥಾಪಿಸದ ಕೆಐಎಡಿಬಿ ಜಾಗ ವಾಪಸ್: ಕೈಗಾರಿಕಾ ಪ್ರದೇಶದಲ್ಲಿ ಹಂಚಿಕೆ ಪಡೆದು ಯೋಜನೆ ಅನುಷ್ಠಾನಕ್ಕೆ ತರದ 9572.63 ಎಕರೆ ಜಾಗದ 1117 ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರುದ್ರೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, 9.5 ಸಾವಿರ ಕೆರೆ ಭೂಮಿಯಲ್ಲಿ 7 ಸಾವಿರ ಎಕರೆಯನ್ನು ಉಕ್ಕು ಉದ್ದಿಮೆಗೆ ನೀಡಲಾಗಿದೆ. ಆದರೆ, ಅವರಿಗೆ ಕಚ್ಚಾವಸ್ತು ಪೂರೈಕೆ ಮಾಡಲಾಗದ ಕಾರಣಕ್ಕೆ ಅವರು ಅನುಷ್ಠಾನಕ್ಕೆ ತಂದಿಲ್ಲ. ಆದರೆ, ಉಳಿದ ಕಡೆ ನೋಟಿಸ್ ನೀಡಿ ಜಾಗವನ್ನು ಕೆಐಎಡಿಬಿ ವಶಕ್ಕೆ ಮರಳಿ ಪಡೆದುಕೊಳ್ಳಲಾಗುತ್ತದೆ ಎಂದರು.
ಶಿವಮೊಗ್ಗ ಹೊರವಲಯದ ಮಾಚೇನಹಳ್ಳಿಯಲ್ಲಿ 140 ಎಕರೆಯಲ್ಲಿ 75 ಎಕರೆ ಖಾಲಿ ಇದ್ದು, ಅದನ್ನು ವಾಪಸ್ ಪಡೆಯಲಾಗುತ್ತದೆ. ಉಳಿದದ್ದರಲ್ಲಿ ಕೈಗಾರಿಕೆ ಇದೆ. ಹಾಗಾಗಿ, ಅದನ್ನು ಬಿಟ್ಟು ಉಳಿದದ್ದನ್ನು ಮಾತ್ರ ವಶಕ್ಕೆ ಪಡೆದುಕೊಂಡು ಸ್ಟಾರ್ಟ್ ಅಪ್ಗಳಿಗೆ ಸಣ್ಣ ಸಣ್ಣ ಫ್ಲಾಟ್ ಮಾಡಿ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.
ಸಲೀಂ ಅಹಮದ್ ವಿರುದ್ಧ ಸಭಾಪತಿ ಗರಂ: ಶೂನ್ಯವೇಳೆಯಲ್ಲಿ ತಮ್ಮ ಅರ್ಜಿ ಪರಿಗಣಿಸದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ವಿರುದ್ಧ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಗರಂ ಆದ ಘಟನೆ ನಡೆಯಿತು.
ವಿಧಾನ ಪರಿಷತ್ನ ಶೂನ್ಯವೇಳೆ ಕಲಾಪ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್, ನನ್ನ ಅರ್ಜಿ ಬಂದಿಲ್ಲ, ನಾನು ಕೊಟ್ಟ ಅರ್ಜಿ ಕಡೆಗಣಿಸಲಾಗಿದೆ ಎಂದು ಅಸಮಾಧಾನ ಹೊರ ಹಾಕಿದರು. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿದ ಸಭಾಪತಿಗಳು ಹಾಕಿದ್ದ ಎಲ್ಲಾ ಅರ್ಜಿ ಪರಿಗಣಿಸಬೇಕಿಲ್ಲ. ನಿನ್ನೆ ಕಲಾಪ ಮುಗಿದ ನಂತರ ಇಂದು ಬೆಳಗ್ಗೆ ಕಲಾಪ ಆರಂಭವಾಗುವವರೆಗೂ ಆದ ಘಟನೆ ಬಗ್ಗೆ ಸದನದ ಗಮನ ಸೆಳೆಯಲು ಶೂನ್ಯವೇಳೆ ಬಳಸಿಕೊಳ್ಳಬೇಕು. ಅದನ್ನು ನೋಡಿಯೇ ಐದು ಅರ್ಜಿಗೆ ಅವಕಾಶ ನೀಡಲಾಗಿದೆ ಎಂದರು.
ಸಭಾಪತಿಗಳ ಉತ್ತರಕ್ಕೆ ಸಮಾಧಾನಗೊಳ್ಳದ ಸಲೀಂ, ರೂಲ್ ನಮಗೆ ಗೊತ್ತಿಲ್ಲವಾ? ಎಂದು ಪ್ರಶ್ನಿಸಿದರು. ನೀವು ಹೇಳಿದಂತೆ ಅವಕಾಶ ಕೊಡಲಾಗಲ್ಲ ಎಂದ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಮುಂದಿನ ಕಲಾಪ ಕೈಗೆತ್ತಿಕೊಂಡರು.
ಓದಿ: ರಾಜ್ಯದಲ್ಲಿ ಎಲ್ಲರಿಗೂ ವಸತಿ ಗುರಿ ಸಾಧಿಸುವುದು ಕಷ್ಟಕರ.. ಸಿಎಜಿ ವರದಿ