ಬೆಂಗಳೂರು: ಜನ ಜನತಾ ಕರ್ಫ್ಯೂ ಪಾಲಿಸುತ್ತಿಲ್ಲ. ಹೀಗಾಗಿ ರಾಜ್ಯಕ್ಕೆ ಲಾಕ್ಡೌನ್ ಅನಿವಾರ್ಯ ಆಗಬಹುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಲಾಕ್ಡೌನ್ ರಾಜ್ಯಕ್ಕೆ ಅನಿವಾರ್ಯ ಆಗಬಹುದು. ಜನರು ನಾವು ಕೊಡುವ ಎಚ್ಚರಿಕೆಯನ್ನು ಪಾಲಿಸುತ್ತಿಲ್ಲ. ಇನ್ನೂ ಹೆಚ್ಚು ಬಿಗಿ ಕ್ರಮ ತೆಗೆದುಕೊಳ್ಳಬಾರದೆಂದರೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು. ಇಲ್ಲದಿದ್ದರೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಕಠಿಣ ಲಾಕ್ಡೌನ್ ಮಾಡುವ ಬಗ್ಗೆ ನಾಳೆ ಚರ್ಚೆ ನಡೆಯಲಿದೆ. ಇಂದೂ ಕೂಡ ಅಧಿಕಾರಿಗಳ ಜೊತೆ ಸಮಾಲೋಚಿಸಬೇಕಿದೆ. ಇನ್ನೂ ಬಿಗಿಯಾದ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಇಂದು ಅಥವಾ ನಾಳೆಯಲ್ಲಿ ತೀರ್ಮಾನ ಆಗಲಿದೆ ಎಂದರು.
ಅಣ್ಣಮ್ಮ ತಾಯಿ ಆಶೀರ್ವಾದದಿಂದ ಕೋವಿಡ್ ಸಂಕಷ್ಟ ಆದಷ್ಟು ಬೇಗ ದೂರ ಆಗಿ ಜನ ನೆಮ್ಮದಿಯಿಂದ ಬದುಕುವ ಒಳ್ಳೆ ಕಾಲ ಬರುತ್ತದೆ ಎಂಬ ವಿಶ್ವಾಸ ಇದೆ ಎಂದರು.
ತೇಜಸ್ವಿ ಸೂರ್ಯ ಅವರು ಕಷ್ಟಪಟ್ಟು, ರಿಸ್ಕ್ ತೆಗೆದುಕೊಂಡು ಹಾಸಿಗೆ ಹಂಚುವಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಸರ್ಕಾರದ ಗಮನಕ್ಕೆ ತಂದರು. ವಿಧಾನಸೌಧದಲ್ಲಿ ಒಂದು ಗಂಟೆ ಕಾಲ ಅವರ ಜೊತೆ ಮಾತನಾಡಿ, ಬಿಗಿಯಾದ ಕ್ರಮ ಕೈಗೊಂಡಿದ್ದೇನೆ. ತೇಜಸ್ವಿ ಸೂರ್ಯ ಮಾಡಿದ ಒಳ್ಳೆ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜಮೀರ್ ಅಹ್ಮದ್ ಇದೇ ತಪ್ಪು ಎಂಬಂತೆ ವಾದಿಸುತ್ತಿದ್ದಾರೆ. ಇನ್ನಾದರೂ ಈ ರೀತಿ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ವಾಸ್ತವಿಕ ಸತ್ಯ ಸಂಗತಿಯನ್ನು ಬಯಲಿಗೆಳೆದಿದ್ದಾರೆ. ಅದೇ ಅಪರಾಧ ಎಂಬುವಂತೆ ಜಮೀರ್ ಅಹ್ಮದ್ ವಾದಿಸಿದ್ದಾರೆ. ಇನ್ನಾದರೂ ತೇಜಸ್ವಿ ಸೂರ್ಯ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.
ಸಿಎಂ ಮನೆ ಮುಂದೆ, ವಿಧಾನಸೌಧದ ಮನೆ ಮುಂದೆ ಕೋವಿಡ್ ಸೋಂಕಿತರು ಆಂಬ್ಯುಲೆನ್ಸ್ನಲ್ಲಿ ಬರುತ್ತಿರುವುದು ಸರಿಯಲ್ಲ. ಅಧಿಕಾರಿಗಳ ಗಮನಕ್ಕೆ ತಂದರೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.