ಬೆಂಗಳೂರು: ಎರಡು ವರ್ಷದಿಂದ ಯಶಸ್ವಿಯಾಗಿ ನಡೆದ ಕಾಂಗ್ರೆಸ್ ಕನಸಿನ ಕೂಸು ಇಂದಿರಾ ಕ್ಯಾಂಟೀನ್ಗೆ ಈಗ ಸಂಕಷ್ಟಗಳು ಎದುರಾಗಿವೆ. ಬಿಜೆಪಿ ಸರ್ಕಾರ ಬಂದಾಗಿನಿಂದ ಇಂದಿರಾ ಕ್ಯಾಂಟೀನ್ ಹಗರಣ ಆರೋಪ, ತನಿಖೆ ಎದುರಿಸುತ್ತಿವೆ. ಇದರಿಂದ ಬೇಸತ್ತಿರುವ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು " ಮಾನಸಿಕ ಕಿರುಕುಳ ಕೊಡಬೇಡಿ" ಎಂದು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಗುತ್ತಿಗೆದಾರರಲ್ಲಿ ಒಬ್ಬರಾದ ಶೆಫ್ ಟಾಕ್ ಸಂಸ್ಥೆಯ ಆಡಳಿತ ನಿರ್ದೇಶಕ ಗೋವಿಂದ ಪೂಜಾರಿ ಈ ಪತ್ರ ಬರೆದಿದ್ದಾರೆ. ಈಗಾಗಲೇ ಎಸಿಬಿ ತನಿಖೆಗೆ ಅಗತ್ಯ ದಾಖಲೆಗಳನ್ನು ನೀಡಲಾಗುತ್ತಿದೆ. ಇದೀಗ ಮತ್ತೆ ಬಿಬಿಎಂಪಿ ಹಣಕಾಸು ಜಂಟಿ ಆಯುಕ್ತರು ಎಫ್ ಐಆರ್ ದಾಖಲಿಸಿರುವುದು ಗೊತ್ತಾಗಿದೆ. ಇದರಿಂದ ಆಹಾರ ಪೂರೈಕೆ ಸೇವೆಗೆ ತೊಂದರೆಯಾಗ್ತಿದೆ. ಸಂಸ್ಥೆಯ ಗೌರವಕ್ಕೆ ಧಕ್ಕೆಯಾಗ್ತಿದೆ ಹಾಗೂ ಮಾನಸಿಕವಾಗಿ ಕಿರುಕುಳವಾಗುತ್ತಿದೆ ಎಂದು ಪತ್ರ ಬರೆದಿದ್ದಾರೆ.
ಇಂದಿರಾ ಕ್ಯಾಂಟೀನಲ್ಲಿ ಮೂರು ಹೊತ್ತಿನ ಊಟ ತಿಂಡಿಗೆ ಜನರಿಂದ 25 ರೂ, ಸರ್ಕಾರದಿಂದ 35 ರೂಪಾಯಿ ಸಬ್ಸಿಡಿ ಪಡೆಯುತ್ತಿದ್ದು, ಲಾಭವಿಲ್ಲದೆ ಆಹಾರ ಪೂರೈಕೆ ಮಾಡಲಾಗ್ತಿದೆ. ಇತ್ತೀಚೆಗೆ ಆಹಾರ ಸಾಮಾಗ್ರಿಗಳ ಬೆಲೆಯೂ ಹೆಚ್ಚಾಗಿದೆ. ಆದರೂ ಎರಡೂವರೆ ವರ್ಷದಿಂದ ಒಂದೇ ದರದಲ್ಲಿ ಆಹಾರ ಪೂರೈಸಲಾಗುತ್ತಿದೆ. ಹೀಗಿದ್ದರೂ, ತನಿಖೆಗಳನ್ನು ಎದುರಿಸಬೇಕಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಇಂದಿರಾ ಕ್ಯಾಂಟೀನ್ಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ತಪ್ಪು ಲೆಕ್ಕ ತೋರಿಸಿ, ಹೆಚ್ಚುವರಿ ಸಬ್ಸಿಡಿ ಹಣ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿರುವ ಆರೋಪದಲ್ಲಿ ಎಸಿಬಿ ತನಿಖೆ ಹಾಗೂ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ಈಗಾಗಲೇ ಇಂದಿರಾ ಕ್ಯಾಂಟೀನ್ ಗುತ್ತಿಗೆ ಅವಧಿ ಮುಗಿದಿದ್ದು, ಹೊಸ ಟೆಂಡರ್ ನಲ್ಲಿ ಈ ಸಂಸ್ಥೆಗಳನ್ನು ಭಾಗವಹಿಸದಂತೆ ಕಪ್ಪು ಚುಕ್ಕೆ ತರಲು ತನಿಖೆಗಳನ್ನು ಹೇರಲಾಗುತ್ತಿದೆ ಎಂದು ಗೋವಿಂದ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.