ಬೆಂಗಳೂರು: ಅಲೋಪತಿ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳು ಇಂದು ಹೊರರೋಗಿಗಳ ವಿಭಾಗ ಮುಚ್ಚುವ ಮೂಲಕ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಕೇಂದ್ರ ಸರ್ಕಾರದ ನೂತನ ನೀತಿಯ ವಿರುದ್ಧ ವೈದ್ಯರು ಕಿಡಿಕಾರುತ್ತಿದ್ದಾರೆ. ದೇಶದಾದ್ಯಂತ ಹೊರರೋಗಿಗಳ ವಿಭಾಗ (ಒಪಿಡಿ) ಬಂದ್ ಮಾಡುವ ಮೂಲಕ ಮುಷ್ಕರ ಹೂಡಲು ಭಾರತೀಯ ವೈದ್ಯಕೀಯ ಸಂಘ ಕರೆ ಕೊಟ್ಟಿದೆ.
ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಆಯುಷ್ ಪದ್ಧತಿಯ ವೈದ್ಯರಿಗೂ ಸಣ್ಣ ಸರ್ಜರಿಗಳನ್ನು ಮಾಡುವ ತರಬೇತಿ ನೀಡುವ ಆದೇಶ ಮಾಡಿದೆ. ಆಯುರ್ವೇದ, ಯುನಾನಿ, ಹೋಮಿಯೋಪತಿ ಹೀಗೆ ಆಲೋಪತಿ ಹೊರತುಪಡಿಸಿ ಬೇರೆಲ್ಲಾ ವೈದ್ಯಪದ್ಧತಿಯಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿರುವವರಿಗೆ ಈ ವರ್ಷದಿಂದಲೇ ಕೆಲವು ಶಸ್ತ್ರಚಿಕಿತ್ಸೆ ಮಾಡಲು ತರಬೇತಿ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಆಲೋಪತಿ ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಹೇಳುವ ಪ್ರಕಾರ ಆಯುಷ್ ವೈದ್ಯರಿಗೆ, ತಜ್ಞರಿಂದಲೇ 39 ಬಗೆಯ ಜನರಲ್ ಸರ್ಜರಿ ಮತ್ತು 19 ವಿಶೇಷ ಸರ್ಜರಿಗಳನ್ನು ಮಾಡಲು ತರಬೇತಿ ನೀಡಲಾಗುತ್ತದೆ. ಇದರಿಂದ ಅನೇಕ ಪ್ರದೇಶಗಳಲ್ಲಿ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಅಭಾವ ಇರುವ ಕಡೆ ಕನಿಷ್ಠ ಇವರ ಸೇವೆ ಪ್ರಯೋಜನಕ್ಕೆ ಬರುತ್ತದೆ ಎನ್ನಲಾಗಿದೆ. ಆದರೆ ಇದು ಜನರ ಜೀವದ ಜೊತೆಗೆ ಚೆಲ್ಲಾಟ ಆಡುವ ವಿಚಾರ ಎನ್ನುತ್ತಾರೆ ಆಲೋಪತಿ ವೈದ್ಯರು.
ಓದಿ: ಜನರು ಉಡುಗೊರೆಯಾಗಿ ನೀಡಿದ್ದ ಬಂಗಾರದ ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸಿದ ಡಿಸಿಎಂ ಕಾರಜೋಳ
ಹೀಗಾಗಿ, ಇಂದು ಬೆಳಗ್ಗೆ 6 ರಿಂದ ಸಂಜೆ 6ರವರಗೆ ಒಪಿಡಿ ಬಂದ್ ಆಗಲಿದೆ. ಬಹುಪಾಲು ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸೇವೆ ಟೆಲಿ ಮೆಡಿಸಿನ್ ಮತ್ತು ಆನ್ಲೈನ್ ಮೂಲಕವೇ ನಡೆಯುತ್ತಿದೆ. ಅವೆಲ್ಲವೂ ಹಾಗೇ ಮುಂದುವರೆಯಲಿದೆ. ಅಲ್ಲದೇ ಕೋವಿಡ್ ಬಂದ ನಂತರ ಜನ ಮುಂಗಡವಾಗಿ ಪ್ರವೇಶ ಪತ್ರ ತೆಗೆದುಕೊಂಡಿರುತ್ತಾರೆ. ಹಾಗಾಗಿ ಬಂದವರನ್ನು ಮರಳಿ ಕಳಿಸುವುದಿಲ್ಲ ಎಂದು ಅನೇಕ ಖಾಸಗಿ ಆಸ್ಪತ್ರೆಗಳು ಹೇಳಿವೆ. ಇದಲ್ಲದೆ ಎಮರ್ಜೆನ್ಸಿ, ಕೋವಿಡ್ ಯೂನಿಟ್, ಸರ್ಜರಿಗಳು ಎಂದಿನಂತೆ ನಡೆಯಲಿವೆ. ಅಪೊಲೊ, ಫೋರ್ಟಿಸ್, ಎಂ ಎಸ್ ರಾಮಯ್ಯ, ಸಾಗರ್ ಮುಂತಾದ ಅನೇಕ ಆಸ್ಪತ್ರೆಗಳಲ್ಲಿ ಕಪ್ಪು ಪಟ್ಟಿ ಧರಿಸಿ ವೈದ್ಯರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಬಂದ್ ಗೆ ನೈತಿಕ ಬೆಂಬಲ ನೀಡುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.
ಅಲೋಪತಿ ವೈದ್ಯರ ಓಪಿಡಿ ಬಂದ್ ಗೆ ಸಡ್ಡು ಹೊಡೆದ ಹೋಮಿಯೋಪತಿ ವೈದ್ಯರು
ಇತ್ತ ಅಲೋಪತಿ ವೈದ್ಯರ ಓಪಿಡಿ ಬಂದ್ ಗೆ ಹೋಮಿಯೋಪತಿ ವೈದ್ಯರು ಸಡ್ಡು ಹೊಡೆದಿದ್ದಾರೆ. ನಾಳೆ ಒಪಿಡಿ ಬಂದ್ ಮಾಡಿ ನಡೆಯಲಿರುವ ಪ್ರತಿಭಟನೆಗೆ ಪ್ರತಿಯಾಗಿ ಫ್ರೀ ಟ್ರೀಟ್ಮೆಂಟ್ ನೀಡಲು ನಿರ್ಧಾರ ಮಾಡಿದ್ದಾರೆ. ಕರ್ನಾಟಕ ಆಯುಷ್ ಫೆಡರೇಷನ್ ಇಂದ ನಾಳೆ ಉಚಿತ ಚಿಕಿತ್ಸೆ ಇರಲಿದ್ದು, ಹೋಮಿಯೋಪತಿ ಆಸ್ಪತ್ರೆಗಳು ಹಾಗೂ ಹೋಮಿಯೋಪತಿ ಕ್ಲಿನಿಕ್ ಗಳಲ್ಲಿ ಉಚಿತ ಚಿಕಿತ್ಸೆ ನೀಡಲಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಸೂಚನೆ
ಭಾರತೀಯ ವೈದ್ಯ ಸಂಘವು ಮುಷ್ಕರ ಹಮ್ಮಿಕೊಂಡಿರುವ ಹಿನ್ನೆಲೆ ಆರೋಗ್ಯ ಸೇವೆಗಳಿಗೆ ವ್ಯತ್ಯಯವಾಗದಂತೆ ಕ್ರಮ ವಹಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (CCIM), ಸ್ನಾತಕೋತ್ತರ ವ್ಯಾಸಂಗ ಮಾಡಿರುವ ಆಯುಷ್ ವೈದ್ಯರು 39 ಸಾಮಾನ್ಯ ಹಾಗೂ 19 ಕಿವಿ, ಮೂಗು, ಗಂಟಲು, ಕಣ್ಣು, ಶಿರ ಮತ್ತು ದಂತ ವೈದ್ಯ ಸೇವೆಗಳ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಬಹುದೆಂದು ಅಧಿಸೂಚಿಸಿದೆ. ಅದನ್ನು ವಿರೋಧಿಸಿ ಭಾರತೀಯ ವೈದ್ಯ ಸಂಘ, ಕರ್ನಾಟಕ ರಾಜ್ಯ ಶಾಖೆಯು ರಾಜ್ಯಾದ್ಯಂತ ಮುಷ್ಕರ ಹಮ್ಮಿಕೊಂಡಿದೆ. ತುರ್ತು ಹಾಗೂ ಕೋವಿಡ್-19 ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ಸ್ಥಗಿತಗೊಳಿಸಲು ವೈದ್ಯರಿಗೆ ಕರೆ ನೀಡಲಾಗಿದೆ.
ನಿಮ್ಮ ಅಧೀನದಲ್ಲಿನ ಅಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗ ಸೇರಿದಂತೆ ಎಲ್ಲಾ ಆರೋಗ್ಯ ಸೇವೆಗಳು ಯಾವುದೇ ವ್ಯತ್ಯಯವಿಲ್ಲದಂತೆ ಎಂದಿನಂತೆ ಕಾರ್ಯನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಹಾಗೂ ಮುಷ್ಕರದ ಅವಧಿಯಲ್ಲಿ ವೈದ್ಯರಿಗೆ ಯಾವುದೇ ರಜೆಯನ್ನು ಮಂಜೂರು ಮಾಡದಿರಲು ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಸೂಚನೆ ನೀಡಿದ್ದಾರೆ.