ಬೆಂಗಳೂರು : ಸೌದಿ ಅರೇಬಿಯಾದ ದೊರೆ ಹಾಗೂ ಇಸ್ಲಾಂ ಕುರಿತು ಆಕ್ಷೇಪಾರ್ಹ ಮಾಹಿತಿ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಮಂಗಳೂರು ಮೂಲದ ಶೈಲೇಶ್ ಕುಮಾರ್ ಎಂಬಾತ ಸೌದಿಯಲ್ಲಿ ಬಂಧಿತನಾಗಿದ್ದು, ಬಿಡುಗಡೆಗೆ ನೆರವಾಗಲು ವಿದೇಶಾಂಗ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಲು ಹೈಕೋರ್ಟ್ ಸಲಹೆ ನೀಡಿದೆ.
ಮಾಜಿ ವಿದೇಶಾಂಗ ಸಚಿವ ಕುನ್ವರ್ ನಟವರ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಲು ಸೌದಿ ಅರೇಬಿಯಾದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚಿಸಿತು. ಶೈಲೇಶ್ ಕುಮಾರ್ ಪತ್ನಿ ಕವಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಮೂಲಕ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ, ಸೌದಿಯಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿ ಮೋಯಿನ್ ಅಖ್ತರ್ ಅವರಿಂದ ಶೈಲೇಶ್ ಕುಮಾರ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದ ನ್ಯಾಯಪೀಠ, ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯೂ (ಐಎಫ್ಎಸ್) ಆಗಿದ್ದ ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಅವರು 'ಒನ್ ಲೈಫ್ ಇಸ್ ನಾಟ್ ಎನಫ್' ಎಂಬ ಪುಸ್ತಕ ರಚಿಸಿದ್ದು, ಅದರಲ್ಲಿ ಇಂಥ ಘಟನೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಒಂದೊಮ್ಮೆ ವಿದೇಶವು ನಾವು ಕೋರಿದ ಮಾಹಿತಿ ಒದಗಿಸದಿದ್ದರೆ ಏನು ಮಾಡಬೇಕು ಎಂದು ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ. ಇದನ್ನು ಹೇಗೆ ನೋಡಬೇಕು ಎಂದು ತಿಳಿಸಿದ್ದಾರೆ. ಈ ದೃಷ್ಟಿಯಿಂದ ನೀವೇಕೆ ನಟವರ್ ಸಿಂಗ್ ಅವರ ಜೊತೆ ಸಮಾಲೋಚನೆ ಮಾಡಬಾರದು? ಈ ವಿಚಾರಗಳಲ್ಲಿ ಅವರಿಗೆ ಅಗಾಧ ಅನುಭವವಿದೆ ಎಂದು ತಿಳಿಸಿತು.
ಅಕ್ತರ್ ಅವರು, ಸೌದಿ ಅರೇಬಿಯಾದ ಆಡಳಿತದ ಸೂಚನೆಯಂತೆ ಶೈಲೇಶ್ ಕುಮಾರ್ ಅವರಿಗೆ ವಿಧಿಸಿರುವ ಶಿಕ್ಷೆಯ ಆದೇಶ ಪಡೆಯಲು ನಮ್ಮ ಅಧಿಕಾರಿ ಖುದ್ದು ಭೇಟಿ ನೀಡಿದ್ದರು. ಆದರೆ, ಆದೇಶ ಪ್ರತಿ ನೀಡಲಿಲ್ಲ. ಬದಲಿಗೆ ಇ-ಮೇಲ್ ಕಳುಹಿಸುವಂತೆ ಸೂಚಿಸಲಾಗಿತ್ತು. ಅದರಂತೆ ಇ-ಮೇಲ್ ಕಳುಹಿಸಲಾಗಿದ್ದು, ಇದುವರೆಗೂ ಆದೇಶ ಪ್ರತಿ ದೊರೆತಿಲ್ಲ.
ಈ ಸಂಬಂಧ ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆಗೆ ಪತ್ರ ಬರೆಯಲಾಗಿದ್ದು, ಭಾರತದ ಅಂಬಾಸಿಡರ್ ಅವರು ಸೌದಿ ಅರೇಬಿಯಾದ ಕಾನೂನು ಇಲಾಖೆಗೂ ಪತ್ರ ಬರೆದಿದ್ದಾರೆ. ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆಯ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಮನವಿ ಮಾಡಿದ್ದರೂ ತೀರ್ಪಿನ ಪ್ರತಿ ನೀಡಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ನಮ್ಮ ಅಧಿಕಾರಿಗಳು ಶೈಲೇಶ್ ಅವರನ್ನು ಭೇಟಿ ಮಾಡಲು ಅನುಮತಿ ಕೋರಿದ್ದರು. ಇದಕ್ಕೆ ಸಮ್ಮತಿ ದೊರೆತಿದ್ದು, ಸೆಪ್ಟೆಂಬರ್ 3ರಂದು ಅಧಿಕಾರಿಗಳು ಅವರನ್ನು ಭೇಟಿ ಮಾಡಲಿದ್ದಾರೆ. ಅಂದು ಶೈಲೇಶ್ ಅವರಿಗೆ ತೀರ್ಪಿನ ಪ್ರತಿ ನೀಡಲಾಗಿದೆಯೇ ಎಂದು ಕೇಳಿ ಅದನ್ನು ಪಡೆಯಲಾಗುವುದು. ನಮ್ಮ ಮಟ್ಟದಲ್ಲಿ ಎಲ್ಲಾ ಪ್ರಯತ್ನ ಮುಗಿದ ಬಳಿಕ ಪ್ರಕರಣವನ್ನು ಸಂಬಂಧಪಟ್ಟ ಸರ್ಕಾರಗಳ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಈ ಅಂಶಗಳನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಿತು.
ಇದನ್ನೂ ಓದಿ : ಅಧ್ಯಯನ ನಡೆಸದೆ ಶಕ್ತಿ ಯೋಜನೆ ಪ್ರಶ್ನಿಸಿದ್ದ ಕಾನೂನು ವಿದ್ಯಾರ್ಥಿಗಳ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ