ಬೆಂಗಳೂರು: 2004ರಿಂದ ಎಥೆನಾಲ್ ಬಗ್ಗೆ ಮಾತುಕತೆಗಳು ನಡೆದಿದ್ದವು, ಇಂದು ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಲ್ಲಿ ಪ್ರಧಾನಿ ಎಥೆನಾಲ್ ಬಗ್ಗೆ ಮಾತನಾಡಿದ್ದಾರೆ. ಮೆಥೆನಾಲ್ ಸ್ವದೇಶಿ ಮತ್ತು ಕಡಿಮೆ ವೆಚ್ಚದಾಯಕವಾಗಿದೆ. ಎಂ.ಡಿ 15 ಪೈಲಟ್ ಯೋಜನೆಯು ಉತ್ತಮ ಉಪಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಮೆಥೆನಾಲ್ ಎಥೆನಾಲ್ ತಂತ್ರಜ್ಞಾನದ ವಾಹನಗಳನ್ನು ಭಾರತವು ರಫ್ತು ಮಾಡಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ವಿಧಾಸೌಧದ ಮುಖ್ಯದ್ವಾರದ ಮೆಟ್ಟಿಲುಗಳ ಮುಂದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂದು ಎಂಡಿ15 (15 ಪ್ರತಿಶತ ಮೆಥನಾಲ್ ಹೊಂದಿರುವ ಡೀಸೆಲ್) ಬಸ್ಗಳನ್ನು ಪ್ರಾಯೋಗಿಕ ಸಂಚಾರಕ್ಕೆ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ನೀತಿ ಆಯೋಗಕ್ಕೆ ವಿಶೇಷವಾಗಿ ಈ ತಂತ್ರಜ್ಞಾನ ತರುವ ಕಾರ್ಯ ಮಾಡಿರುವುದಕ್ಕೆ ಶ್ಲಾಘಿಸುತ್ತೇನೆ.
ಮಾಲಿನ್ಯವು ದೊಡ್ಡ ಸಮಸ್ಯೆಯಾಗಿದೆ. ಭಾರತದಲ್ಲಿ ಸದ್ಯ 34 ಕೋಟಿ ವಾಹನಗಳಿದ್ದು, ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಶೇಕಡಾ 12ರಷ್ಟು ಇದೆ. ಇದಕ್ಕೆ ಎಲ್ಲ ರೀತಿಯಲ್ಲೂ ಮೆಥೆನಾಲ್ ಬಳಕೆ ಅವಶ್ಯವಾಗಿದೆ. ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ಬಳಸಿ ಮೆಥೆನಾಲ್, ಅಮೋನಿಯಂ ನೈಟ್ರೇಟ್, ಯೂರಿಯಾವನ್ನು ಉತ್ಪಾದಿಸಲಾಗುತ್ತದೆ ಎಂದು ಹೇಳಿದರು. ದೇಶದಲ್ಲಿ 700 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯಾಗುತ್ತಿದ್ದೆ. ನಮ್ಮ ಗುರಿ 1200 ಮಿಲಿಯನ್ ಟನ್ ಆಗಿದೆ. ಸದ್ಯ ದೇಶದ ಬಹುತೇಕ ಎಲ್ಲಾ ಕಾರ್ಪೊರೇಷನ್ ನಷ್ಟದಲ್ಲಿದ್ದು, ಮೆಥೆನಾಲ್ ತಂತ್ರಜ್ಞಾನದ ಇಂಡಕ್ಷನ್ನಿಂದ ಲಾಭದ ಹಾದಿಗೆ ಮರಳಲಿದೆ. ಮೆಥನಾಲ್ ಸ್ವದೇಶಿ, ಕಡಿಮೆ ವೆಚ್ಚದಾಯಕವಾಗಿದೆ ಎಂದು ಹೇಳಿದರು.
ವಾಹನ ಖರೀದಿಗೆ ಬಡ್ಡಿ ರಹಿತ ಸಾಲ: ಪರ್ಯಾಯ ಇಂಧನ ಸಾಲಗಳನ್ನು ತೆಗೆದುಕೊಳ್ಳುವ ಗುತ್ತಿಗೆದಾರರಿಗೆ ಬಡ್ಡಿ ರಹಿತ ಯೋಜನೆ ತರಲಿದ್ದೇವೆ. ಡೀಸೆಲ್ ಬೆಲೆ ಅಧಿಕವಾಗಿದ್ದು, ಸದ್ಯ ಮೆಥನಾಲ್ ಪ್ರತಿ ಲೀಟರ್‌ಗೆ 26 ರೂ.ಗಳಾಗಿದೆ. ಹೆಚ್ಚು ಮೈಲೇಜ್ ನೀಡುತ್ತದೆ. ಆದ್ದರಿಂದ ಮೆಥನಾಲ್ ಪೈಲಟ್ ಯೋಜನೆ ಉತ್ತಮ ಉಪಕ್ರಮವಾಗಿದೆ. ಡೀಸೆಲ್ ಬದಲಿಗೆ ಮೆಥನಾಲ್ ಬರಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯಿಲ್ಲದ ಸಮಯ ಬರುತ್ತದೆ ಎಂದು ಹೇಳಿದರು.
ಇಂಗಾಲದ ಹೊರಸೂಸುವಿಕೆ ತಡೆಯಲು ಮೆಥೆನಾಲ್ ಬಳಕೆ: ಇಂಗಾಲದ ಹೊರಸೂಸುವಿಕೆಯು ದೊಡ್ಡ ಸಮಸ್ಯೆಯಾಗಿದೆ ಹೀಗಾಗಿ ಭಾರತವು ಮೆಥೆನಾಲ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಮೆಥೆನಾಲ್ ಎಥೆನಾಲ್ ತಂತ್ರಜ್ಞಾನವು ಸ್ಥಳೀಯವಾಗಿದ್ದು. ಇದರ ಬಳಕೆಯ ವಾಹನಗಳನ್ನು ವಿದೇಶಕ್ಕೆ ರಫ್ತು ಮಾಡಲಿದ್ದೇವೆ. ಈ ಎಲ್ಲ ವಿಚಾರದಲ್ಲಿ ನೀತಿ ಆಯೋಗಗಳ ಕೊಡುಗೆ ಮತ್ತು ಸಮರ್ಪಣೆ ಅಪಾರ ಎಂದು ಹೇಳಿದರು.
ಇತಿಹಾಸ ಪುಟ ಸೇರಲಿರುವ ತಂತ್ರಜ್ಞಾನದ ವಿಸ್ಮಯ: ಕಾರ್ಯಕ್ರಮದಲ್ಲಿ ನೀತಿ ಆಯೋಗದ ಸಲಹೆಗಾರ ಸುಧೇಂದು ಜ್ಯೋತಿ ಸಿನ್ಹಾ ಮಾತನಾಡಿ, ನಾವು ಇಂದು ಸಾಕ್ಷಿಯಾಗುತ್ತಿರುವ ತಂತ್ರಜ್ಞಾನದ ವಿಸ್ಮಯ ಇತಿಹಾಸ ಪುಟಗಳಲ್ಲಿ ಸೇರಲಿದೆ. 2016ರಲ್ಲಿ ಈ ಯೋಜನೆ ಮೊಳಕೆಯೊಡೆಯಿತು. 7 ವರ್ಷಗಳಿಂದ ಮೆಥೆನಾಲ್ ಕುರಿತು ಕೆಲಸ ಮಾಡುತ್ತಿದ್ದೇವೆ. ಇದು ಹಲವು ಪ್ರಕ್ರಿಯೆಗಳ ಮೂಲಕ ಸಾಗಿತು. ಆದ್ದರಿಂದ ನಾವು ನೋಡುತ್ತಿರುವುದು ತಂತ್ರಜ್ಞಾನದ ಪಯಣ ಎಂದು ಹೇಳಿದರು.
ಕಾರ್ಬನ್ ಫೂಟ್ ಪ್ರಿಂಟ್ ಕಡಿಮೆ: ಡೀಸೆಲ್ ಅನ್ನು ಪ್ರಮುಖವಾಗಿ ವಾಣಿಜ್ಯ ವಾಹನಗಳಲ್ಲಿ ಬಳಸಲಾಗುತ್ತದೆ. ಶೇ 15 ರಷ್ಟು ಮೆಥೆನಾಲ್ ಮಿಶ್ರಣವು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಕಾರ್ಬನ್ ಫೂಟ್ ಪ್ರಿಂಟ್ ತೀವ್ರವಾಗಿ ಕಡಿಮೆಯಾಗುತ್ತದೆ ಎಂದು ರಾಜ್ಯ ಪೆಟ್ರೋಲಿಯಂ ಸಚಿವ ರಾಮೇಶ್ವರ್ ಹೇಳಿದರು. ಕಾರ್ಯಕ್ರಮದಲ್ಲಿ ಕೆಎಸ್ಆರ್ಟಿಸಿ ಎಂ.ಡಿ ಅನ್ಬು ಕುಮಾರ್, ಬಿಎಂಟಿಸಿ ಎಂಡಿ ಸತ್ಯವತಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸಾರಿಗೆ ಸಚಿವಾಲಯದ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಪರೀಕ್ಷೆ ಸಮಯ, ರಾತ್ರಿ ವೇಳೆ ಧ್ವನಿವರ್ಧಕ ಬಳಸಬೇಡಿ: ಸುರೇಶ್ ಕುಮಾರ್ ಮನವಿ