ಬೆಂಗಳೂರು : 73 ನೇ ಸ್ವಾತಂತ್ರೋತ್ಸವ ಅಂಗವಾಗಿ ಜೆಡಿಎಸ್ ಕಚೇರಿ ಆವರಣದಲ್ಲಿ ಇಂದು ಜೆಡಿಎಸ್ನ ಹಿರಿಯ ಮುಖಂಡ ನಾರಾಯಣರಾವ್ ಅವರು ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣದ ಬಳಿಕ ಜೆಡಿಎಸ್ ಮುಖಂಡ ನಾರಾಯಣರಾವ್ ಮಾತನಾಡಿ, ಈಗಾಗಲೇ ದೇಶದಲ್ಲಿ ಒಮ್ಮೆ ತುರ್ತು ಪರಿಸ್ಥಿತಿ ನೋಡಿದ್ದೇವೆ. ಮತ್ತೊಮ್ಮೆ ಅಂತಹ ಸ್ಥಿತಿ ಬರುವ ಸನ್ನಿವೇಶ ಕಾಣಿಸುತ್ತಿದೆ. ಹಾಗಾಗದಂತೆ ತಡೆಯಬೇಕಿದೆ. ಅದಕ್ಕೆ ದೇವೇಗೌಡರೇ ನೇತೃತ್ವ ವಹಿಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯದಲ್ಲಿ ನೆರೆ ಉಂಟಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರವೂ ಸೂಕ್ತ ಪರಿಹಾರ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲ ರಾಜಕೀಯ ಪಕ್ಷಗಳನ್ನು ಒಂದುಗೂಡಿಸಿ ಹೋರಾಡಬೇಕಿದೆ. ಈ ಕಾರ್ಯ ದೇವೇಗೌಡರಿಂದ ಮಾತ್ರ ಸಾಧ್ಯ ಎಂದರು. ಜೆಡಿಎಸ್ ಪಕ್ಷ ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸಿದೆ.ಈ ಮಾತನ್ನು ಸ್ವತಃ ದೇವೇಗೌಡರೂ ಒಪ್ಪಿಕೊಂಡಿದ್ದಾರೆ. ಅದೆಲ್ಲವನ್ನೂ ಸರಿಪಡಿಸಿಕೊಂಡು ಹೋಗಬೇಕಿದೆ.ದೇವೇಗೌಡರ ಕೈ ಬಲಪಡಿಸಬೇಕಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಮಾಜಿ ಶಾಸಕರು ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಇನ್ನು ಇದೇ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ದೇಶದ ಜನತೆಗೆ 73 ನೇ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದಾರೆ.