ಬೆಂಗಳೂರು : ಮಹಾರಾಷ್ಟ್ರದಲ್ಲಿ ಕೋವಿಡ್-19 ವೈರಾಣು ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದ ಜಿಲ್ಲೆಗಳಲ್ಲಿ ವಿಶೇಷ ಕಣ್ಗಾವಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಪರಿಸ್ಥಿತಿ ಮತ್ತು ಡೆಲ್ಟಾ ಫ್ಲಸ್ ರೂಪಾಂತರಿ ವೈರಸ್ ಪ್ರಕರಣಗಳು ಹೆಚ್ಚಾಗಿ ವರದಿಯಾಗಿರುವ ಕಾರಣ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಮಹಾರಾಷ್ಟ್ರದಿಂದ ಆಗಮಿಸುವವರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಮಹಾರಾಷ್ಟ್ರದಿಂದ ಆಗಮಿಸುವ ವ್ಯಕ್ತಿಗಳ ಕುರಿತು ವಿಶೇಷ ಕಣ್ಗಾವಲು ವಹಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲಿಂದ ಬರುವ ವ್ಯಕ್ತಿಗಳ ಕುರಿತಂತೆ ಈ ಕೆಳಕಂಡ ವಿಶೇಷ ಕಣ್ಗಾವಲು ಕ್ರಮ ಜಾರಿಗೊಳಿಸಿ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಆದೇಶಿಸಿದ್ದಾರೆ. ಈ ಆದೇಶವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು, ಪೊಲೀಸ್ ಆಯುಕ್ತರು, ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಇಲಾಖೆ ಮುಖ್ಯಸ್ಥರುಗಳು ಮತ್ತು ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಅನುಷ್ಕಾನಗೊಳಿಸಲು ಸೂಚಿಸಿದ್ದಾರೆ.
ಗಡಿ ಭಾಗದಲ್ಲಿ ವಿಶೇಷ ಕಣ್ಗಾವಲಿಗೆ ಸೂಚನೆ
ವಿಮಾನ, ರೈಲು, ಬಸ್ಗಳು, ಟ್ಯಾಕ್ಸಿ, ಸ್ವಂತ ವಾಹನಗಳ ಮೂಲಕ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರು 72 ಗಂಟೆಯೊಳಗೆ ಮಾಡಿಸಿರುವ RTPCR ನೆಗೆಟಿವ್ ವರದಿ ಕಡ್ಡಾಯ. ಅಥವಾ ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ಪಡೆದಿರುವ ಕುರಿತು ಪ್ರಮಾಣ ಪತ್ರ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರಿಗೂ ಇದು ಅನ್ವಯ.
ರೈಲ್ವೇ ಪ್ರಾಧಿಕಾರ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ RTPCR ನೆಗೆಟಿವ್ ಪರೀಕ್ಷೆ ವರದಿ ಅಥವಾ ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ಪಡೆದಿರುವ ಕುರಿತು ಪ್ರಮಾಣ ಪತ್ರ ಖಚಿತಪಡಿಸಿಕೊಳ್ಳಬೇಕು. ಬಸ್ಗಳ ಮೂಲಕ ಪ್ರಯಾಣಿಸುವವರು RTPCR ನೆಗೆಟಿವ್ ವರದಿ ಕಡ್ಡಾಯ ಅಥವಾ ಕೋವಿಡ್ ಲಸಿಕೆ ಪಡೆದಿರುವ ಕಡ್ಡಾಯ ಪ್ರಮಾಣ ಪತ್ರ. ಆಯಾ ಬಸ್ನ ನಿರ್ವಾಹಕರು ಇದನ್ನ ಖಚಿತಪಡಿಸಿಕೊಳ್ಳಬೇಕು.
ಚೆಕ್ ಪೋಸ್ಟ್ಗಳಲ್ಲಿ ಬಿಗಿ ಭದ್ರತೆ
ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳಿಗೆ (ಚಾಲಕರು/ಸಹಾಯಕರು/ಪ್ರಯಾಣಿಕರು) ಮೇಲೆ ತಿಳಿಸಿರುವ ನಿಯಮಗಳ ಅನುಪಾಲನೆಗೆ ಚೆಕ್ ಪೋಸ್ಟ್ಗಳಲ್ಲಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿ, ಸೂಕ್ತ ವ್ಯವಸ್ಥೆಯನ್ನು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಲ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಲ್ಪಾವಧಿಗೆ ಕರ್ನಾಟಕಕ್ಕೆ ಭೇಟಿ ನೀಡುವವರು ಹಾಗೂ ವಿದ್ಯಾರ್ಥಿಗಳಿಗೆ ಉಲ್ಲೇಖ (1) ಮತ್ತು (3) ರ ಸುತ್ತೋಲೆಯಲ್ಲಿ ತಿಳಿಸಿರುವ ಮಾರ್ಗಸೂಚಿಗಳು ಅನ್ವಯಿಸುತ್ತವೆ. ಈ ಕೆಳಕಂಡ ಪ್ರಕರಣಗಳಿಗೆ RTPCR ನೆಗೆಟಿವ್ ಟೆಸ್ಟ್ ವರದಿ ಹೊಂದುವುದರಿಂದ ವಿನಾಯಿತಿ ನೀಡಲಾಗಿದೆ.
ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ಪಡೆದಿರುವ ಕುರಿತು ಪ್ರಮಾಣ ಪತ್ರವನ್ನು ಹೊಂದಿರುವವರು, ಸಾಂವಿಧಾನಿಕ ಕಾರ್ಯಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳು, ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಮಹಾರಾಷ್ಟ್ರದಿಂದ ತುರ್ತು ಸಂದರ್ಭಗಳಲ್ಲಿ (ಕುಟುಂಬದಲ್ಲಿ ಮರಣ ಸಂಭವಿಸಿದ ಪಕ್ಷದಲ್ಲಿ, ವೈದ್ಯಕೀಯ ಚಿಕಿತ್ಸೆ, ಇತ್ಯಾದಿ) ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರ ಸ್ಯಾಬ್ ಮಾದರಿಗಳನ್ನು ಪರೀಕ್ಷೆಗಾಗಿ ಕರ್ನಾಟಕದಲ್ಲಿಯೇ ಸಂಗ್ರಹಿಸತಕ್ಕದ್ದು ಎಂದು ಸೂಚಿಸಲಾಗಿದೆ.
ಸದರಿ ಪ್ರಯಾಣಿಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಇತ್ಯಾದಿ ಪೂರ್ಣ ವಿವರಗಳನ್ನು ಗುರುತಿನ ಚೀಟಿಯ ಆಧಾರದ ಅನ್ವಯ ಪಡೆಯತಕ್ಕದ್ದು ಮತ್ತು RTPCR ಪರೀಕ್ಷೆಯ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಶಿಷ್ಟಾಚಾರದಂತೆ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಲಾಗಿದೆ.