ಬೆಂಗಳೂರು : ಕೊರೊನಾ ಮಹಾಮಾರಿ ಲಾಭವನ್ನು ಆರೋಗ್ಯ ವಿಮಾ ಸಂಸ್ಥೆಗಳು ಪಡೆಯುತ್ತಿದ್ದು, ಶೇ 5 ರಿಂದ 100 ರವರೆಗೆ ವಿಮೆ ಕಂತಿನ ಪಾವತಿಯಲ್ಲಿ ಏರಿಕೆ ಮಾಡಿದೆ.
ಕೋವಿಡ್ ಕಾರಣದಿಂದ ವಿಮೆ ನಿಯಂತ್ರ ಇಲಾಖೆ ಹೆಚ್ಚು ಆರೋಗ್ಯ ಸೇವೆಗಳನ್ನ ಕವರ್ ಮಾಡುವುದಕ್ಕೆ ಸೂಚಿಸಿದ ಹಿನ್ನಲೆ, ವಿಮೆ ಕಂತು ಈ ಭಾರಿ ಏರಿಕೆ ಕಂಡಿದೆ. ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಉದ್ಯಮಿ ಆನಂದ್, ಕಳೆದ ವರ್ಷ 3 ಸದಸ್ಯರ ಕುಟುಂಬಕ್ಕೆ 25 ಸಾವಿರ ರೂ. ಕಂತು ಕಟ್ಟಿದ್ದು, ಈ ವರ್ಷ 35 ಸಾವಿರ ಕಟ್ಟಿದ್ದೇನೆ. ವ್ಯಾಪಾರ ವಹಿವಾಟು ಮಂದಗತಿ ನಡುವೆಯೂ ಶೇ. 40 ರಷ್ಟು ಹೆಚ್ಚು ಕಟ್ಟಿದ್ದೇನೆ. ಇದು ಮಧ್ಯಮ ವರ್ಗಕ್ಕೆ ದೊಡ್ಡ ಮೊತ್ತ. ಆಸ್ಪತ್ರೆ ಬಿಲ್ ಲಕ್ಷದಲ್ಲಿ ಬರುತ್ತದೆ ಎಂಬ ಭೀತಿಯಿಂದ ವಿಮೆ ತೆಗೆದುಕೊಳ್ಳುವ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಮೆ ಕಂತು ಹೆಚ್ಚಳದ ಬಗ್ಗೆ ವಕೀಲ ನರಸಿಂಹ ಮೂರ್ತಿ ಮಾತನಾಡಿ, ಖಾಸಗಿ ವಿಮೆ ಸಂಸ್ಥೆಗಳು ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಬಳಿ ದುಡ್ಡು ಸುಲಿಗೆ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಖಾಸಗಿ ವಿಮೆ ಸಂಸ್ಥೆಗಳು ಲಾಬಿ ನಡೆಸಿ, ಮಹಾಮರಿಯ ಭೀತಿಯನ್ನ ದುರುಪಯೋಗಪಡಿಸಿಕೊಳ್ಳುತ್ತಿದೆ. ಕೂಡಲೇ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. 60 ವರ್ಷ ಮೇಲ್ಪಟ್ಟವರಿಗೆ ಹೆಚ್ಚು ಕಂತು ಹಾಕಲಾಗುತ್ತಿದ್ದು, ಜನರಿಗೆ ಬೇರೆ ವಿಧಿಯಿಲ್ಲದೆ ವಿಮೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.