ಬೆಂಗಳೂರು : ಕೊರೊನಾ ಮಹಾಮಾರಿ ರಾಜ್ಯಕ್ಕೆ ಕಾಲಿಡುತ್ತಿದ್ದಂತೆ ಶೀತ, ಕೆಮ್ಮು, ಜ್ವರದ ಮಾತ್ರೆಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಮಾತ್ರೆಗಳ ಮಾರಾಟ ನಡೆಯಿತ್ತಿದೆ. ಮೊದಲೆಲ್ಲಾ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದ ಜನರೀಗ ಮುಗಿಬಿದ್ದು ಮಾತ್ರೆಗಳನ್ನ ಖರೀದಿಸ ತೊಡಗಿದ್ದಾರೆ.
ಕೊರೊನಾದಿಂದ ವಿಟಮಿನ್ ಮಾತ್ರೆಗಳ ಉದ್ದಿಮೆಗೆ ಸುಗ್ಗಿಯ ಕಾಲ ಬಂದಿದೆ. ಔಷಧ ಅಂಗಡಿಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಮಾರಾಟವನ್ನೂ ಮೀರಿಸುವಂತೆ ವಿಟಮಿನ್ ಮಾತ್ರೆಗಳ ವಹಿವಾಟು ನಡೆಯುತ್ತಿದೆ. ಜಿಂಕ್ ವಿಟಮಿನ್ ಸಿ, ಡಿ ಮತ್ತು ಬಿ ಮಾತ್ರೆಗಳ ಮಾರಾಟ ಜೋರಾಗಿದೆ. ಬಹುತೇಕ ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿಯೂ ಸಾಮಾನ್ಯ ದಿನಗಳಲ್ಲಿನ ವಹಿವಾಟಿನ ಎರಡು ಮೂರು ಪಟ್ಟು ಹೆಚ್ಚು ನಡೆಸಿದೆ.
ಮೊದಲೆಲ್ಲಾ ಇಮ್ಯುನಿಟಿ ಕಡಿಮೆ ಇದೆ ಒಂದಷ್ಟು ವಿಟಮಿನ್ ಮಾತ್ರೆ ತೆಗೆದುಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದರಷ್ಟೇ. ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ ಜನರು, ಈಗ ಕೊರೊನಾ ಆತಂಕದಿಂದ ಸ್ವತಃ ಹೋಗಿ ವಿಟಮಿನ್ ಮಾತ್ರೆಗಳ ಖರೀದಿ ಮಾಡಿ ಸೇವನೆ ಮಾಡುತ್ತಿದ್ದಾರೆ. ಕೊರೊನಾ ಕಾಲದಲ್ಲಿ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಸರ್ಕಾರವೂ ಸ್ವಾಗತಿಸಿದೆ. ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್, ಜಿಂಕ್, ವಿಟಮಿನ್ ಸಿ, ಡಿ, ಬಿ ಮಾತ್ರೆಗಳನ್ನು ಪಡೆಯುವುದು ಒಳ್ಳೆಯದು. ಇದರಿಂದ ಸಮಸ್ಯೆ ಇಲ್ಲ, ಜೀವಕ್ಕೆ ಅಪಾಯವಿಲ್ಲ. ಆರೋಗ್ಯಕ್ಕೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿದಿನ ಗಂಟಲು, ಬಾಯಿ ಸ್ವಚ್ಛವಾಗಿಟ್ಟುಕೊಳ್ಳುವುದು ದಿನದಲ್ಲಿ ಮೂರು ಬಾರಿ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದನ್ನು ಮಾಡಬೇಕು, ಒಳ್ಳೆಯ ನಿದ್ದೆ ಮಾಡಬೇಕು. ಆರೋಗ್ಯ ಕಾಪಾಡಲು ನಿದ್ದೆ ಬಹಳ ಪ್ರಮುಖ ಪಾತ್ರವಹಿಸಲಿದೆ ಮತ್ತು ಉತ್ತಮ ತರಕಾರಿ ಇರುವ ಆಹಾರ, ಹಣ್ಣು ಸ್ವೀಕಾರ ಮಾಡುವುದು ಬಹಳ ಮುಖ್ಯ. ಸ್ವಚ್ಛತೆ ಕಾಪಾಡುವುದು, ಅಂತರ ಕಾಪಾಡುವುದು, ಮಾಸ್ಕ್ ಬಳಸಿಕೊಳ್ಳುವುದು ಉತ್ತಮ. ಇದರ ಜೊತೆಗೆ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಂಡರೆ ಒಳ್ಳೆಯದು. ಕೇವಲ ಕೊರೊನಾ ಮಾತ್ರವಲ್ಲ, ಇತರ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗೂ ಇದರಿಂದ ಪರಿಹಾರ ಸಿಗಲಿದೆ ಎಂದರು.
ಅತಿಯಾದರೆ ಅಮೃತವೂ ವಿಷ ಎನ್ನುವಂತೆ ವಿಟಮಿನ್ ಮಾತ್ರೆಗಳನ್ನ ಅತಿಯಾಗಿ ಬಳಕೆ ಮಾಡುವುದರಿಂದ ದೇಹದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರಲಿದೆ. ಹಾಗಾಗಿ, ನಿಯಮಿಯವಾಗಿ ವಿಟಮಿನ್ ಮಾತ್ರೆಗಳ ಸೇವನೆ ಮಾಡಬೇಕು ಎನ್ನುವುದು ತಜ್ಞರ ಅಭಿಪ್ರಾಯ. ವೈದ್ಯಕೀಯ ಸಲಹೆ ಪಡೆದು ಎಷ್ಟು ಪ್ರಮಾಣದಲ್ಲಿ ಯಾವ ವಿಟಮಿನ್ ಅಗತ್ಯವಿದೆಯೋ ಅಂತಹ ಮಾತ್ರೆಗಳನ್ನು ಪಡೆಯುವಂತೆ ಜನರಿಗೆ ಮನವಿ ಮಾಡಿದ್ದಾರೆ.
ದೇಹದಲ್ಲಿ ಪೋಷಕಾಂಶಗಳು ಕಡಿಮೆಯಾದಾಗ ವೈದ್ಯರು ವಿಟಮಿನ್ ಮಾತ್ರೆ ಶಿಫಾರಸು ಮಾಡುತ್ತಾರೆ, ವಿಟಮಿನ್ ಬ್ಯಾಲೆನ್ಸ್ ಆದಾಗ ಮಾತ್ರೆ ನಿಲ್ಲಿಸಬೇಕು. ಆದರೆ, ಕೆಲವರು ಅದನ್ನು ನಿರಂತರವಾಗಿ ಮುಂದುವರೆಸುತ್ತಾರೆ. ಇದರಿಂದ ಬೇರೆ ಸಮಸ್ಯೆ ಎದುರಾಗಲಿದೆ. ಕ್ಯಾಲ್ಸಿಯಂ ಸಪ್ಲಿಮೆಂಟ್ ಅಧಿಕವಾದರೆ ಕಿಡ್ನಿಗೆ ಸಮಸ್ಯೆ ಆಗಲಿದೆ. ವಿಟಮಿನ್ ಇ ದೇಹದಲ್ಲಿ ಹೆಚ್ಚಾದರೆ ತಲೆಸುತ್ತು, ಕಣ್ಣು ಸಮಸ್ಯೆ ಸಾಧ್ಯತೆ, ಸತುವಿನ ಅಂಶದ ಸಪ್ಲಿಮೆಂಟ್ ಹೆಚ್ಚಾದರೆ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ, ವಿಟಮಿನ್ ಎ ಹೆಚ್ಚಾದರೆ ನಿದ್ರಾಹೀನತೆ, ಯಕೃತ್, ಮಿದುಳಿನ ಮೇಲೆ ಅಡ್ಡ ಪರಿಣಾಮ ಬೀರಲಿದೆ ಎನ್ನುವ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ.