ಬೆಂಗಳೂರು: ಮ್ಯಾಕ್ಸಿ ಕ್ಯಾಬ್‍ಗಳ ಆಸನಗಳ ಸಾಮರ್ಥ್ಯವನ್ನು 12+1ರಿಂದ 19+1ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಮತ್ತು ನೋಂದಣಿ ವೇಳೆ ಶುಲ್ಕವನ್ನು ಕಡಿಮೆ ಮಾಡಲು ಪ್ರಯತ್ನ ಮಾಡುವುದಾಗಿ ಶೀಘ್ರವೇ ಸಿಎಂ ಜೊತೆ ಚರ್ಚಿಸುವುದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ಭರವಸೆ ನೀಡಿದರು.
ವಿಧಾನಸಭೆ ಪ್ರಶ್ನೋತ್ತರ ವೇಳೆ ಶಾಸಕಿ ರೂಪಾಲಿ ಸಂತೋಷ್ ನಾಯಕ್ ಮ್ಯಾಕ್ಸಿ ಕ್ಯಾಬ್‍ಗಳು ಆಸನ ಸಾಮರ್ಥ್ಯವನ್ನು 19+1ಕ್ಕೆ ಏರಿಸಬೇಕು. ಇದರಿಂದ ಕಾನೂನು ಬಾಹಿರವಾಗಿ ಸಂಚರಿಸುವುದು ತಪ್ಪುತ್ತದೆ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ರಘುಪತಿ ಭಟ್, ನೋಂದಣಿ ವೇಳೆ ಪ್ರತಿ ಆಸನಕ್ಕೆ 900 ರೂಪಾಯಿ ನಿಗದಿ ಮಾಡಲಾಗಿದೆ. ಅದನ್ನು 600 ರೂಪಾಯಿಗೆ ನಿಗದಿ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ಸವದಿ, ಅನಧಿಕೃತವಾಗಿ ಹೆಚ್ಚುವರಿ ಸೀಟುಗಳನ್ನು ಅಳವಡಿಸಿಕೊಂಡು ಮ್ಯಾಕ್ಸಿ ಕ್ಯಾಬ್‍ಗಳು ಸಂಚರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಧಿಕೃತವಾಗಿಯೇ ಅನುಮತಿ ನೀಡಲು ಬಜೆಟ್‍ನಲ್ಲಿ ಸಿಎಂ ಘೋಷಣೆ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ಪ್ರತಿ ವಾಹನದಿಂದ 6ರಿಂದ 8 ಸಾವಿರ ರೂಪಾಯಿ ತೆರಿಗೆ ಬರಲಿದೆ. ನಿಗದಿತ ತೆರಿಗೆ ಪ್ರಮಾಣ ಕಡಿಮೆ ಮಾಡಲು ಮುಖ್ಯಮಂತ್ರಿಗಳ ಜತೆ ಚರ್ಚಿಸುವುದಾಗಿ ಸಾರಿಗೆ ಸಚಿವ ಸವದಿ ಭರವಸೆ ನೀಡಿದರು.