ಬೆಂಗಳೂರು : ಮಾನವ ವನ್ಯಜೀವಿ ಸಂಘರ್ಷದಿಂದ ಹಸು, ಎಮ್ಮೆ , ಕೋಣ ಮೃತಪಟ್ಟಲ್ಲಿ ಅವುಗಳ ಮಾಲೀಕರಿಗೆ ಈಗ ನೀಡಲಾಗುತ್ತಿರುವ ಪರಿಹಾರ ಹಣವನ್ನು 10 ಸಾವಿರದಿಂದ 75 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಈ ಸಂಬಂಧ ನಿನ್ನೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ವನ್ಯಜೀವಿಗಳಿಂದ ಸಾಕು ಪ್ರಾಣಿಗಳ ಹತ್ಯೆ ಆದಲ್ಲಿ ತಕ್ಷಣಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 20 ಸಾವಿರ ರೂಪಾಯಿ ಬಿಡುಗಡೆ ಮಾಡಲು ಅವಕಾಶ ನೀಡಲಾಗಿದೆ. ಆ ನಂತರ ಸ್ಥಳೀಯ ಪಶು ವೈದ್ಯಾಧಿಕಾರಿಗಳು ಸತ್ತ ಸಾಕುಪ್ರಾಣಿಯ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡಿದ ನಂತರ ಉಳಿದ ಮೊತ್ತ ( ಗರಿಷ್ಠ ರೂ. 75000 - 00 ಮಿತಿಗೆ ಒಳಪಟ್ಟು ) ಪಾವತಿಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದರ ಜೊತೆ ಕುರಿ, ಮೇಕೆ, ಆಡು ಮೃತಪಟ್ಟಲ್ಲಿ ಈಗ ನೀಡುತ್ತಿರುವ ರೂ. 5,000 ಪರಿಹಾರ ಧನವನ್ನು ರೂ. 10 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಲಿಂಬಾವಳಿ ಹೇಳಿದ್ದಾರೆ.
ಈ ಆದೇಶದ ಮೂಲಕ ಜನಪ್ರತಿನಿಧಿಗಳು, ರೈತರು ಮತ್ತು ಸಾರ್ವಜನಿಕರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದು ಸಚಿವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.