ಬೆಂಗಳೂರು: ಶಿಲ್ಪ ಕೆತ್ತನೆ ಮತ್ತು ಮರದ ಕೆತ್ತನೆಯ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಮಾಸಿಕ ಪ್ರೋತ್ಸಾಹಧನವನ್ನು ಈಗಿನ 750 ರೂಪಾಯಿಗಳಿಂದ 1,500 ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ.ನಾಗರಾಜು ತಿಳಿಸಿದ್ದಾರೆ.
ವಿಕಾಸೌಧದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಸಾಗರದಲ್ಲಿನ ‘ಶಿಲ್ಪ ಗುರುಕುಲದಲ್ಲಿ’ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ 17 ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಿ ಸಚಿವರು ಮಾತನಾಡುತ್ತಾ, ಕಲ್ಲು ಮತ್ತು ಮರ ಕೆತ್ತನೆ ತರಬೇತಿಯ ಮತ್ತೊಂದು ಕೇಂದ್ರವನ್ನು ಉತ್ತರ ಕರ್ನಾಟಕ ಭಾಗದಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಈ ಸರ್ಕಾರ ಬಂದ್ಮೇಲೆ ₹100ರಲ್ಲಿ ₹65 ಕಮಿಷನ್ ಏಜೆಂಟರಿಗೆ ಹೋಗ್ತಿದೆ, ಉಳಿದ ₹35ರಷ್ಟು ಕೆಲಸ: ಹೆಚ್ಡಿಕೆ
ಶಿಲ್ಪ ಮತ್ತು ಮರದ ಕೆತ್ತನೆಗೆ ಬಹುಬೇಡಿಕೆ ಇರುವುದರಿಂದ ಮತ್ತಷ್ಟು ಅಭ್ಯರ್ಥಿಗಳಿಗೆ ತರಬೇತಿಗೆ ವ್ಯವಸ್ಥೆ ಮಾಡಲಾಗುವುದು. ಕರ ಕುಶಲಕರ್ಮಿಗಳಿಗೆ ಸರ್ಕಾರ ನೀಡುತ್ತಿರುವ ಆರ್ಥಿಕ ನೆರವನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಮಹಿಳೆಯರು ಸಹ ಕರಕುಶಲ ತರಬೇತಿ ಪಡೆಯುಲು ಆಸಕ್ತಿ ತೋರಿಸಬೇಕು. ಸಾಗರ ತರಬೇತಿ ಕೇಂದ್ರದಲ್ಲಿನ ಸಮಸ್ಯೆಗಳನ್ನು ಸದ್ಯದಲ್ಲಿಯೇ ಸಭೆ ನಡೆಸಿ ಬಗೆಹರಿಸಿ, ಕೇಂದ್ರವನ್ನು ಸುಸಜ್ಜಿತಗೊಳಿಸಲಾಗುವುದು ಎಂದು ಭರವಸೆ ಕೊಟ್ಟರು.