ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಆಗಾಗ ನನ್ನ ನೆನಪಿಸಿಕೊಳ್ಳುತ್ತಾರೆ. ಅವರ ವಿಚಾರದಲ್ಲಿ ಕಣ್ಣು, ಕಿವಿ, ಬಾಯಿ ಮುಚ್ಕೊಂಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೆಡಿಎಸ್ ಮುಖಂಡರು, ಶಾಸಕರನ್ನ ನಾನು ಕಾಂಗ್ರೆಸ್ಗೆ ಸೆಳೆಯುತ್ತಿಲ್ಲ. ಕೆಲವರು ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬಂದ್ರೆ, ಅವರನ್ನು ನಾವು ತಿರಸ್ಕರಿಸಲ್ಲ. ಕೆಲವರು ಬಿಜೆಪಿಗೆ ಹೋಗಬಹುದು. ಕೆಲವರು ಕಾಂಗ್ರೆಸ್ಗೆ ಬರಬಹುದು. ಸಿಎಂ ಇಬ್ರಾಹಿಂ ಎಲ್ಲೂ ಹೋಗಲ್ಲ. ಅವರ ಜೊತೆ ನಾನು ಮಾತನಾಡಿದ್ದೇನೆ ಎಂದರು.
'ನಾನು ಯಾರ ಪರವೂ ಇಲ್ಲ'
ಯುವ ಕಾಂಗ್ರೆಸ್ ಚುನಾವಣೆ ವಿಚಾರ ಮಾತನಾಡಿದ ಡಿಕೆಶಿ, ನಾನು ಯಾರ ಪರವೂ ಇಲ್ಲ. ಯಾರ ವಿರುದ್ಧವೂ ಇಲ್ಲ. ನಲಪಾಡ್ ಕೂಡ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ನಲಪಾಡ್ ಮೇಲೆ ಇರುವ ಸಣ್ಣ ಪುಟ್ಟ ಆರೋಪಗಳೆಲ್ಲಾ ಪರಿಗಣನೆಗೆ ಬರಲ್ಲ. ನನ್ನ ಮೇಲೂ ಹಲವು ಆರೋಪಗಳಿವೆ. ರಾಜಕೀಯವಾಗಿ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ. ಬಿಜೆಪಿಯವರ ಮೇಲೆ ಆರೋಪಗಳಿಲ್ವಾ?, ನನ್ನ ವಿಚಾರದಲ್ಲಿ ಮಾಧ್ಯಮದವರು ಏನೇನು ಮಾಡಿದ್ದಾರೆ ಗೊತ್ತು. ಬಿಜೆಪಿಯ ಎಷ್ಟು ಮಂದಿಯ ಮೇಲೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ದಾಳಿಗಳಾಗಿವೆ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಓದಿ:ಈ ಜನ್ಮದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ: ಸಚಿವ ಈಶ್ವರಪ್ಪ
ಜೆಡಿಎಸ್ ಎ ಟೀಂ, ಬಿ ಟೀಂ ಗೊತ್ತಿಲ್ಲ. ಮೈತ್ರಿಗಳಾದಾಗ ನಿಮಗೆ ಗೊತ್ತಾಗಲಿದೆ. ಈಗಲೇ ನಾನು ಜೆಡಿಎಸ್, ಬಿಜೆಪಿ ಬಿ ಟೀಂ ಅಂತಾ ಹೇಳಲು ಹೋಗಲ್ಲ. ಜೆಡಿಎಸ್ ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ ನೋಡೋನಾ, ಆಗ ಮಾತಾಡ್ತೇನೆ ಎಂದರು.
'ಆತುರ ಬೇಡ'
ಕೊರೊನಾ ಲಸಿಕೆ ವಿಚಾರದಲ್ಲಿ ಆತುರದ ಕ್ರಮ ಬೇಡ, ಚುನಾವಣೆಗಾಗಿ ಜನರ ಅರೋಗ್ಯದ ವಿಚಾರದಲ್ಲಿ ಆಟವಾಡೋದು ಬೇಡ. ಲಾಕ್ಡೌನ್, ಸೀಲ್ಡೌನ್, ಗಂಟೆ ಹೊಡೆಯುವುದು, ಇವುಗಳಿಂದ ಈಗಾಗಲೇ ಆರ್ಥಿಕತೆ ಕುಸಿದಿದೆ. ತಜ್ಞರ ಅಭಿಪ್ರಾಯ ಪಡೆದು ಲಸಿಕೆ ಬಿಡುಗಡೆ ಮಾಡಬೇಕು ಎಂದು ಡಿಕೆಶಿ ಅಭಿಪ್ರಾಯಪಟ್ಟರು.